ಬೆಂಗಳೂರು : ಕೋವಿಡ್ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಕರ್ಫ್ಯೂವನ್ನು ಇಡೀ ವಾರ ಮುಂದುವರಿಸುವ ಸಾಧ್ಯತೆ ದಟ್ಟವಾಗಿದೆ. ಇದಕ್ಕಾಗಿ ಇಂದು ಬೆಳಗ್ಗೆ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
ಕೊರೋನಾ ನಿಯಂತ್ರಣಕ್ಕಾಗಿ ಇಡೀ ರಾಜ್ಯಕ್ಕೆ ಲಾಕ್ ಡೌನ್ ಮಾಡಲಾಗುವುದೋ ಅಥವಾ ಬೆಂಗಳೂರನ್ನು ಲಾಕ್‌ಡೌನ್ ಮಾಡುತ್ತಾರೋ ಎನ್ನುವುದು ಜನತೆಯ ಪ್ರಶ್ನೆ.ಕೋವಿಡ್ ವ್ಯಾಪಕತೆಯ ಹಿನ್ನೆಲೆಯಲ್ಲಿ ಜನತೆಯೂ ಮಾನಸಿಕವಾಗಿ ಸರಕಾರದ ನಿರ್ಧಾರವನ್ನು ಬೆಂಬಲಿಸಲು ತಯಾರಾಗಿದ್ದಾರೆ. ವೀಕೆಂಡ್ ಕರ್ಫ್ಯೂವನ್ನು ಯಶಸ್ವಿಗೊಳಿಸಿದ್ದಾರೆ. ಅನಗತ್ಯ ಓಡಾಟಕ್ಕೆ ಜನತೆಯೂ ಬ್ರೇಕ್ ಹಾಕಿದ್ದಾರೆ.ಒಟ್ಟಿನಲ್ಲಿ ವಾರಪೂರ್ತಿ ಕರ್ಫ್ಯೂ ಮಾಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರವಾಗಲಿದೆ. ಈಗಾಗಲೇ ಆದೇಶವಾಗಿರುವಂತೆಯೇ ನಿಯಮಗಳನ್ನು ಕಠಿಣ ರೀತಿಯಲ್ಲಿ ಜಾರಿಗೊಳಿಸಲಾಗುವುದೋ ಎನ್ನುವ ಪ್ರಶ್ನೆ ಕೂಡ ಇದೆ.
ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಅನಿವಾರ್ಯ ಎನ್ನುವ ಅಭಿಪ್ರಾಯ ತಜ್ಞರಿಂದ ಬಂದಿದೆ. ಸಿಎಂ ಸೇರಿ ಹಲವು ಸಚಿವರು, ಅಧಿಕಾರಿಗಳು ಸಹ ಅದೇ ಅಭಿಪ್ರಾಯದಲ್ಲಿದ್ದಾರೆ. ಆದರೆ ಲಾಕ್ ಡೌನ್ ಮಾಡಿದರೆ ಬಡ ವ್ಯಾಪಾರಿಗಳು, ಕೂಲಿಕಾರ್ಮಿಕರು ಸಂಕಷ್ಟಕ್ಕೆ ಸಿಲುಕುತ್ತಾರೆ ಎನ್ನುವ ವಾದವೂ ಇದೆ. ಜೀವ ಉಳಿದರೆ ಕೂಲಿ, ವ್ಯಾಪಾರ. ಹಾಗಾಗಿ ಮೊದಲು ಜೀವ ಉಳಿಸುವ ಕೆಲಸವಾಗಬೇಕು ಎನ್ನುವುದು ಹಲವರ ವಾದ.
ಕೊರೊನಾ ನಿಯಂತ್ರಣಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಂಡಿರುವ ರಾಜ್ಯ ಸರ್ಕಾರ ಲಾಕ್ ಡೌನ್ ಮಾಡುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇವತ್ತು ನಿರ್ಧರಿಸಬೇಕಾದ ವಿಷಯಗಳು :
1) ಇಡೀ ರಾಜ್ಯಕ್ಕೆ ಲಾಕ್ಡೌನ್ ಆಗುತ್ತಾ ಇಲ್ಲವಾ ?
2) ಬೆಂಗಳೂರಿಗೆ ಮಾತ್ರ ಲಾಕ್ಡೌನ್ ಸೀಮಿತವಾ ?
3) ಅಥವಾ ಈಗಿರುವ ಥರ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಲಾಕ್ಡೌನ್ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಮುಂದುವರೆಯುತ್ತದೆಯಾ ?
ಈ ಕುರಿತು ಇಂದಿನ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆಯಾಗಲಿದೆ. ರಾಜ್ಯಾದ್ಯಂತ ಮುಂದಿನ 15 ದಿನ ಲಾಕ್ ಡೌನ್ ಮಾಡುವ ಕುರಿತಂತೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದ್ದು ವಾರಾಂತ್ಯದ ಕರ್ಪ್ಯೂ ಅಥವಾ ಲಾಕ್ ಡೌನ್ ಮಾಡುವ ಬಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸಚಿವ ಸಹೋದ್ಯೋಗಿಗಳ ಜೊತೆ ಚರ್ಚಿಸಿದ್ದಾರೆ.