ಮಂಗಳೂರು: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಭಾನುವಾರ ನಡೆದ ಖೈದಿಗಳ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಕೈದಿಗಳನ್ನು ಸ್ಥಳಾಂತರ ಮಾಡಲಾಗಿದೆ, ಆದರೆ ಖೈದಿಗಳು ಇಲ್ಲಿಂದ ಮತ್ತೊಂದು ಜೈಲಿಗೆ ಹೋಗಲು ಒಪ್ಪದ ಕಾರಣ ಅವರನ್ನು ಬಲವಂತವಾಗಿ ಕರೆದೊಯ್ಯಬೇಕಾದ ಸ್ಥಿತಿ ಎದುರಾಗಿತ್ತು.
ಮಂಗಳೂರಿನ ಸಿ ಆರ್ ಮೈದಾನದಲ್ಲಿ ಎಲ್ಲರಿಂದಲೂ ಪ್ರತ್ಯೇಕವಾಗಿ ಮಾಹಿತಿಗಳನ್ನು ಪಡೆದುಕೊಂಡು ಸ್ಥಳಾಂತರ ಮಾಡಲಾದ ಖೈದಿಗಳನ್ನು ಧಾರವಾಡ, ಬೆಳಗಾವಿ ಮತ್ತು ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ. ಪ್ರತೀ ತಂಡದಲ್ಲಿ 6, 7, 7ರಂತೆ ಪ್ರತ್ಯೇಕ ತಂಡ ಮಾಡಿ ಕರೆದೊಯ್ಯಲಾಗಿದೆ. ಇನ್ನು ಇವರನ್ನು ಕರೆದೊಯ್ಯವ ಸಂದರ್ಭದಲ್ಲೂ ಇವರ ಬಳಿ ಮಾರಕಾಸ್ತ್ರಗಳೇನಾದರೂ ಇವೆಯೇ ಎಂದು ಶೋಧಿಸಿಯೇ ಕರೆದೊಯ್ಯಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಹರಿರಾಂ ಶಂಕರ್ ಹೇಳಿದ್ದಾರೆ. ಮೂರು ಪ್ರತ್ಯೇಕ ಬಸ್ ಗಳಲ್ಲಿ ಒಂದೊಂದು ಬಸ್ ಗಳಲ್ಲಿ ಹದಿನೈದವರೆಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಇವರೆಲ್ಲರ ವಿರುದ್ಧ ಹಲವು ಠಾಣೆಗಳಲ್ಲಿ ಕ್ರಿಮಿನಲ್ ಕೃತ್ಯಗಳು ದಾಖಲಾಗಿವೆ.