ಬೆಂಗಳೂರು : ವಾರಾಂತ್ಯದ ಕರ್ಫ್ಯೂ ನಡುವೆಯೂ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸುಮಾರು 2 ಸಾವಿರಕ್ಕೂ ಹೆಚ್ಚು ಜೋಡಿಗಳು ಸರ್ಕಾರದ ಷರತ್ತುಬದ್ಧ ಅನುಮತಿಯೊಂದಿಗೆ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಜಾ ದಿನವಾದ ಕಾರಣ ರಾಜ್ಯಾದ್ಯಂತ ಭಾರೀ ಸಂಖ್ಯೆಯಲ್ಲಿ ಮದುವೆಗಾಗಿ ಕಲ್ಯಾಣಮಂಟಪ, ದೇಗುಲಗಳ ಛತ್ರಗಳು ಬುಕ್ ಆಗಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದರೂ ಮಂಗಲ ಕಾರ್ಯಕ್ಕೆ ಅಡ್ಡಿಯಾಗಬಾರದು ಎನ್ನುವ ಕಾರಣಕ್ಕೆ ಮದುವೆ ಕಾರ್ಯಕ್ಕೆ ಷರತ್ತುಬದ್ಧ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತದ ಅನುಮತಿ ಪಡೆದು 50 ಮಂದಿಯ ಮಿತಿಗೊಳಪಟ್ಟು ರಾಜ್ಯಾದ್ಯಂತ ಮದುವೆ ಕಾರ್ಯಕ್ರಮಗಳು ನಡೆದವು.
ದ.ಕ, ಉಡುಪಿಯಲ್ಲಿ 600ಕ್ಕೂ ಹೆಚ್ಚು: ದಕ್ಷಿಣ ಕನ್ನಡ ಮತ್ತು ಉಡುಪಿ ಎರಡು ಜಿಲ್ಲೆಗಳಲ್ಲಿ ಒಂದೇ ದಿನ 600ಕ್ಕೂ ಹೆಚ್ಚು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದು ವಿಶೇಷ. ದಕ್ಷಿಣ ಕನ್ನಡ 300ಕ್ಕೂ ಹೆಚ್ಚು ಹಾಗೂ ಉಡುಪಿಯಲ್ಲಿ 354 ಜೋಡಿ ಕರ್ಫ್ಯೂ ನಡುವೆ ಸತಿಪತಿಗಳಾದರು. ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ದೇಗುಲದಲ್ಲಿ ಒಂದೇ ದಿನ 47 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅರ್ಚಕರು ಸೇರಿ ಪ್ರತಿಯೊಂದು ಜೋಡಿಯ ಕಡೆಯಿಂದ 10 ಮಂದಿಯನ್ನಷ್ಟೇ ಸೇರಿಸಿ ಕೋವಿಡ್ ನಿಯಮಾವಳಿ ಉಲ್ಲಂಘನೆಯಾಗದಂತೆ ಮದುವೆ ಕಾರ್ಯ ನೆರವೇರಿಸಲಾಯಿತು. ಇನ್ನು ಚಿಕ್ಕಮಗಳೂರು 179ಕ್ಕೂ ಹೆಚ್ಚು, ಚಿತ್ರದುರ್ಗ 144, ಉತ್ತರ ಕನ್ನಡ-132, ಧಾರವಾಡ 116, ದಾವಣಗೆರೆಯಲ್ಲಿ 134 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ, ಶಿವಮೊಗ್ಗ 30, ಕೊಡಗು 40ಕ್ಕೂ ಹೆಚ್ಚು, ಬೆಂಗಳೂರು ಗ್ರಾ. 50ಕ್ಕೂ ಹೆಚ್ಚು, ಹಾವೇರಿ 89 ಹಾಗೂ ಕೊಪ್ಪಳ ಜಿಲ್ಲೆಯಲ್ಲಿ 59ಕ್ಕೂ ಹೆಚ್ಚು ಜೋಡಿಗಳು ಸತಿಪತಿಗಳಾದರು.
ಉಲ್ಲಂಘನೆ ದಂಡ: ಸರ್ಕಾರದ ಸೂಚನೆ ಹೊರತಾಗಿಯೂ ಬಾಗಲಕೋಟೆ, ಚಿತ್ರದುರ್ಗ ಸೇರಿದಂತೆ ಕೆಲವೆಡೆ 50ಕ್ಕಿಂತ ಹೆಚ್ಚು ಮಂದಿಯನ್ನು ಸೇರಿಸಿ ಮದುವೆ ಕಾರ್ಯಕ್ರಮ ಆಯೋಜಿಸಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ವಧು-ವರರ ಕುಟುಂಬ, ಕಲ್ಯಾಣಮಂಟಪದವರಿಗೆ ದಂಡ ವಿಧಿಸಿದ ಪ್ರಸಂಗಗಳೂ ನಡೆದಿವೆ.