ಆಟೋಚಾಲಕನೆಂದರೆ ಮೊದಲಿಗೆ ನೆನಪಿಗೆ ಬರುವಂತದ್ದು ಶಂಕರ್ ನಾಗ್ ಚಲನಚಿತ್ರ “ಆಟೋರಾಜ”., ಈ ಚಲನಚಿತ್ರದಿಂದಲೇ ಪ್ರೇರಣೆಗೊಂಡು ಒಂದಷ್ಟು ಯುವಕರು ಆಟೋ ಓಡಿಸಿಕೊಂಡು ಸಮಾಜದಲ್ಲಿ ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ. ಇನ್ನು ಕೆಲವರು ಬದುಕೆಂಬ ಬಂಡಿಯ ಓಡಿಸಲು ಮೂರು ಚಕ್ರದ ಬಂಡಿಯೆ ಆಸರೆ ಎಂಬಂತೆ ಆಟೋ ಓಡಿಸಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸ್ನೇಹ ಎನ್ನುವುದು ಪಾರ್ಟಿಯ ಗತ್ತು ಎನ್ನುವಂತಾಗಿದೆ. ಸಮಾರಂಭದ ನೆಪದಲ್ಲಿ ತಿಂದು ತೇಗುವವರೆ ಹೆಚ್ಚು ಆದರೇ ಇಲ್ಲೊಬ್ಬ ಆಟೋ ಚಾಲಕ ತನ್ನ ಮದುವೆಯ ವಾರ್ಷಿಕ ದಿನದಂದು ನೊಂದ ಕುಟುಂಬಗಳಿಗೆ ಸಹಾಯ ಹಸ್ತ ನೀಡುವ ಮೂಲಕ ತನ್ನ ಸಾಮಾಜಿಕ ಪ್ರಜ್ಞೆಯನ್ನು ಮೆರೆದಿದ್ದಾರೆ.
ಶಿರ್ಲಾಲು ಗ್ರಾಮ ಮಜಲಪಲ್ಕೆ ನಿವಾಸಿ ಶಿವಾನಂದ ಮತ್ತು ಜಯಲಕ್ಷ್ಮಿ ದಂಪತಿಗಳ 25ನೇ ವರ್ಷದ ವಿವಾಹ ವಾರ್ಷಿಕ ಸಮಾರಂಭದಲ್ಲಿ ಊರಿನ ಕಷ್ಟದಲ್ಲಿರುವ ನೊಂದ ಕುಟುಂಬಗಳಿಗೆ ಸಹಾಯ ಹಸ್ತ ನೀಡುವ ಮೂಲಕ ಕಷ್ಟದಲ್ಲಿರುವ ಜನರ ಕಣ್ಣೀರು ಒರೆಸುವ ಪುಣ್ಯದ ಕೆಲಸ ಮಾಡಿದ್ದಾರೆ.

ತಾನು ಎಷ್ಟು ಸಂಪಾದಿಸಿದ್ದೇನೆ ಎನ್ನುವುದಕ್ಕಿಂತ ಸಂಪಾದನೆಯಿಂದ ಸಮಾಜಕ್ಕೆ ಏನು ನೀಡಿದ್ದೇನೆ ಎನ್ನುವುದು ಮುಖ್ಯಾವಾಗಿರುತ್ತದೆ. ವಿವಿಧ ದಿನಗಳ ನೆಪದಲ್ಲಿ ಪ್ರತಿಷ್ಠೆಗಾಗಿ ದುಂದುವೆಚ್ಚ ಮಾಡುತ್ತಾ ಸಮಾಜದ ಬಗ್ಗೆ ಕಿಂಚಿತ್ತೂ ಯೋಚಿಸದೆ ಬದುಕುತ್ತಿರುವ ಸ್ವಾರ್ಥ ಬದುಕಿನ ನಡುವೆ ಶಿವಾನಂದ ಜಯಲಕ್ಷ್ಮಿ ದಂಪತಿಗಳ ಸಾಮಾಜಿಕ ಪ್ರಜ್ಞೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ..