ಸುಳ್ಯ : ಕೋಳಿ ಪದಾರ್ಥಕ್ಕೆ ಸಂಬಂಧಿಸಿ ಜಗಳ ಆರಂಭವಾಗಿ ಮಾತಿಗೆ ಮಾತು ಬೆಳೆದು ತಂದೆಯೇ ಮಗನನ್ನು ಕೊಂದ ಘಟನೆ ಗುತ್ತಿಗಾರು ಗ್ರಾಮದ ಮೊಗ್ರ ಏರಣಗುಡ್ಡೆ ಬಳಿ ನಡೆದಿದೆ.
ಮೊಗ್ರ ಏರಣಗುಡ್ಡೆಯ ಮಾತೃ ಮಜಲು ನಿವಾಸಿ ಶಿವರಾಮ (32) ಮೃತರು.
ಶೀನ ಎಂಬವರಿಗೂ ಅವರ ಮಗ ಶಿವರಾಮ ಎಂಬವರಿಗೂ ನಿನ್ನೆ ತಡರಾತ್ರಿ ಕೋಳಿ ಪದಾರ್ಥದ ವಿಚಾರವಾಗಿ ಜಗಳ ಆರಂಭವಾಗಿದ್ದು, ಶಿವರಾಮ ರಾತ್ರಿ ಮನೆಗೆ ಬರುವಾಗ ಕೋಳಿ ಪದಾರ್ಥ ಖಾಲಿ ಆಗಿತ್ತೆನ್ನಲಾಗಿದೆ.
ಇದನ್ನು ಆಕ್ಷೇಪಿಸಿ ಆತ ಮಾತನಾಡ ತೊಡಗಿದಾಗ ತಂದೆ ಶೀನರಿಗೂ ಆತನಿಗೂ ಜಗಳ ಆರಂಭವಾಗಿದ್ದು, ಕೋಪಗೊಂಡ ಶೀನ ಬಡಿಗೆಯಿಂದ ಮಗನ ತಲೆಗೆ ಹೊಡೆದರೆನ್ನಲಾಗಿದೆ.
ಏಟು ಬಲವಾಗಿ ಬಿದ್ದ ಪರಿಣಾಮ ಶಿವರಾಮ ಸ್ಥಳದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆನ್ನಲಾಗಿದೆ.
ವಿಷಯ ತಿಳಿದು ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ
ಆರೋಪಿ ಶೀನನನ್ನು ಬಂಧಿಸಿದ್ದಾರೆ.
ಶಿವರಾಮರ ಮೃತದೇಹವನ್ನು ಕಡಬ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಮೃತರು ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ.

























