ಪುತ್ತೂರು : ಭಾರತೀಯ ಜನತಾ ಪಾರ್ಟಿ ವತಿಯಿಂದ ದಿ. ಪ್ರವೀಣ್ ನೆಟ್ಟಾರು ರವರ ಕುಟುಂಬಕ್ಕೆ ನಿರ್ಮಿಸಿ ಕೊಡಲಾಗುತ್ತಿರುವ ನೂತನ ಮನೆಯ ಗೃಹಪ್ರವೇಶವು ಎ.27 ರಂದು ನಡೆಯಲಿದೆ.
ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ನೆಟ್ಟಾರು ಎಂಬಲ್ಲಿ ನೂತನವಾಗಿ ನಿರ್ಮಿಸಿರುವ “ಪ್ರವೀಣ್” ಮನೆಯ ಗೃಹಪ್ರವೇಶವು ಶ್ರೀ ಗಣಪತಿ ಹೋಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ನಡೆಯಲಿದೆ.
ಎ.27 ರಂದು ಬೆಳಿಗ್ಗೆ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಭಜನಾ ಸಂಕೀರ್ತನೆ ಹಾಗೂ ಸಂಜೆ ಶ್ರೀ ಕಲ್ಲುರ್ಟಿ ದೈವದ ನೇಮೋತ್ಸವ ನಡೆಯಲಿದೆ.
ಕಳೆದ ಜುಲೈನಲ್ಲಿ ಪ್ರವೀಣ್ ನೆಟ್ಟಾರು ರವರ ಹತ್ಯೆಯಾಗಿದ್ದು, ಅವರ ಕನಸಿನ ಮನೆ ನಿರ್ಮಾಣದ ಜವಾಬ್ದಾರಿಯನ್ನು ಭಾರತೀಯ ಜನತಾ ಪಾರ್ಟಿ ವಹಿಸಿಕೊಂಡಿತ್ತು.
ಪ್ರವೀಣ್ ರವರ ಮನೆ ನಿರ್ಮಾಣದ ಮುತುವರ್ಜಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ವಹಿಸಿಕೊಂಡಿದ್ದು, ತಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತನ ಕನಸನ್ನು ನನಸಾಗಿಸಬೇಕು, ಅದೇ ರೀತಿ ಅವರ ಕುಟುಂಬಕ್ಕೆ ಸೂರನ್ನು ಕಲ್ಪಿಸಿಬೇಕೆಂಬ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸಿ ಪ್ರವೀಣ್ ನೆಟ್ಟಾರು ರವರ ಕುಟುಂಬಕ್ಕೆ ನೂತನ ಮನೆಯನ್ನು ನಿರ್ಮಾಣ ಮಾಡಿಕೊಡುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದರು..




























