ಪುತ್ತೂರು, ಆ.3: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿರುವ ವಿಶ್ವ ಹಿಂದೂ ಪರಿಷದ್ (ವಿಹಿಂಪ), ದೇವಸ್ಥಾನದ ಜಾಗದಲ್ಲಿ ರಸ್ತೆ ನಿರ್ಮಾಣದ ಕುರಿತು ಉಂಟಾಗಿರುವ ಗೊಂದಲವನ್ನು ನಿವಾರಿಸುವಂತೆ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಆಗ್ರಹಿಸಿ ದೇವಸ್ಥಾನದ ಆಡಳಿತ ಮಂಡಳಿಗೆ ಸೋಮವಾರ ಮನವಿ ಸಲ್ಲಿಸಿತು.
ದೇವಸ್ಥಾನವು ಇನ್ನಷ್ಟು ಅಭಿವೃದ್ಧಿ ಹೊಂದಬೇಕು, ಭಕ್ತರಿಗೆ ಉತ್ತಮ ಸೌಲಭ್ಯಗಳು ದೊರೆಯಬೇಕು ಹಾಗೂ ಧಾರ್ಮಿಕ ವೈಭವ ಹೆಚ್ಚಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ವಿಹಿಂಪ ತಿಳಿಸಿದೆ. ಆದರೆ ದೇವಸ್ಥಾನದ ಅಭಿವೃದ್ಧಿ ಹಾಗೂ ಹೊಸ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಯೋಜನೆಗಳನ್ನು ಭಕ್ತರೊಂದಿಗೆ ಸಮಾಲೋಚನೆ ನಡೆಸದೆ ರೂಪಿಸುವುದು ಸೂಕ್ತವಲ್ಲ. ದೇವಸ್ಥಾನದಂತಹ ಸಾರ್ವಜನಿಕ ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಭಕ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಮೂಹಿಕ ನಿರ್ಣಯದ ಮೂಲಕ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಭಿವೃದ್ಧಿ ಕಾಮಗಾರಿಯ ಭಾಗವಾಗಿ ನಟರಾಜ ವೇದಿಕೆ ಹಾಗೂ ಅಲ್ಲಿದ್ದ ಕಟ್ಟಡವನ್ನು ತೆರವುಗೊಳಿಸಿರುವ ಬಗ್ಗೆ ಉಲ್ಲೇಖಿಸಿರುವ ವಿಹಿಂಪ, ಈ ಕಾರ್ಯವು ಸಂಬಂಧಪಟ್ಟ ಕಾನೂನು ಹಾಗೂ ಆಡಳಿತಾತ್ಮಕ ನಿಯಮಗಳಂತೆ ನಡೆದಿದೆಯೇ, ಟೆಂಡರ್ ಪ್ರಕ್ರಿಯೆ ಪಾಲಿಸಲಾಗಿದೆಯೇ ಹಾಗೂ ತೆರವುಗೊಳಿಸಿದ ಸಾಮಗ್ರಿಗಳಿಂದ ಬಂದ ಆದಾಯವನ್ನು ದೇವಸ್ಥಾನದ ಖಾತೆಗೆ ನಿಯಮಾನುಸಾರ ಜಮೆ ಮಾಡಲಾಗಿದೆಯೇ ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದೆ.
ಪ್ರಮುಖ ಬೇಡಿಕೆಗಳು
ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣ ಬೆಂಬಲ.
ಅಭಿವೃದ್ಧಿಯಿಂದ ದೇವಸ್ಥಾನದ ಪರಂಪರೆ, ಪಾವಿತ್ರ್ಯ ಹಾಗೂ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಕ್ರಮ.
ಹಿಂದೂ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನದ ಜಾಗದಲ್ಲಿ ಸಾರ್ವಜನಿಕ ಸಂಚಾರಕ್ಕಾಗಿ ರಸ್ತೆ ನಿರ್ಮಿಸಬಾರದು.
ಹಿಂದೂ ಪರಿವಾರದ ಮನೆಗಳಿಗೆ ಮಡಿವಾಳಕಟ್ಟೆ ಬದಿಯಿಂದ ರಸ್ತೆ ನಿರ್ಮಾಣಕ್ಕೆ ವಿರೋಧವಿಲ್ಲ.
ರಸ್ತೆ ಅಥವಾ ಇತರ ಅಭಿವೃದ್ಧಿ ಯೋಜನೆಗಳ ಬಗ್ಗೆ ಭಕ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳಬೇಕು.
ಅಭಿವೃದ್ಧಿ ಯೋಜನೆಗಳ ಕುರಿತು ಸಾರ್ವಜನಿಕ ಸಭೆ ಅಥವಾ ಸಂವಾದ ವೇದಿಕೆ ಆಯೋಜಿಸಬೇಕು.
ಯೋಜನೆಯ ಸಂಪೂರ್ಣ ವಿವರ, ನಕ್ಷೆ ಹಾಗೂ ಅಂದಾಜು ವೆಚ್ಚವನ್ನು ಸಾರ್ವಜನಿಕರಿಗೆ ತಿಳಿಸಬೇಕು.
ನಟರಾಜ ವೇದಿಕೆ ತೆರವು ಕಾರ್ಯದ ಸಂಪೂರ್ಣ ಮಾಹಿತಿ ಹಾಗೂ ಲೆಕ್ಕಪತ್ರವನ್ನು ಬಹಿರಂಗಪಡಿಸಬೇಕು.
ನಾಗದೇವರಿಗೆ ಪ್ರತಿದಿನ ತ್ರಿಕಾಲ ಪೂಜೆ ನಡೆಸುವಂತೆ ಕ್ರಮ ಕೈಗೊಳ್ಳಬೇಕು.
ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಾಣ ಕಾರ್ಯವನ್ನು ಆರು ತಿಂಗಳೊಳಗೆ ಪೂರ್ಣಗೊಳಿಸಿ ಕಾರ್ಯಯೋಜನೆ ಪ್ರಕಟಿಸಬೇಕು.
ನವಗ್ರಹ ದೇವತೆಗಳಿಗೆ ಪ್ರತಿದಿನ ತ್ರಿಕಾಲ ಪೂಜೆ ಹಾಗೂ ಭಕ್ತರಿಗೆ ದಿನಪೂರ್ತಿ ತೀರ್ಥ-ಪ್ರಸಾದದ ವ್ಯವಸ್ಥೆ ಕಲ್ಪಿಸಬೇಕು.
ದೇವಸ್ಥಾನದ ಭವಿಷ್ಯಕ್ಕೆ ಸಂಬಂಧಿಸಿದ ಎಲ್ಲ ಪ್ರಮುಖ ನಿರ್ಧಾರಗಳನ್ನು ಭಕ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಮೂಹಿಕವಾಗಿ ಕೈಗೊಳ್ಳಬೇಕು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಅಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕೋಶಾಧಿಕಾರಿ ಮಾಧವ ಪೂಜಾರಿ, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ, ಪ್ರಮುಖರಾದ ಮುರಳಿಕೃಷ್ಣ ಹಸಂತಡ್ಕ, ಜಿಲ್ಲಾ ಪ್ರಚಾರ-ಪ್ರಸಾರ ಪ್ರಮುಖ ಕೇಶವ್, ನಗರ ಪ್ರಖಂಡ ಅಧ್ಯಕ್ಷ ದಾಮೋದರ ಪಾಟಾಳಿ, ನಗರ ಪ್ರಖಂಡ ಕಾರ್ಯದರ್ಶಿ ಜಿತೇಶ್ ಬಲ್ನಾಡ್, ಗ್ರಾಮಾಂತರ ಪ್ರಖಂಡ ಅಧ್ಯಕ್ಷ ಜಯಂತ್ ಶೆಟ್ಟಿ ಕಂಬಳತ್ತಡ್ಡ, ಸುರಕ್ಷಾ ಪ್ರಮುಖ್ ಜೀವನ್ ಬಲ್ನಾಡ್, ಸಾಪ್ತಾಹಿಕ ಮಿಲನ್ ಪ್ರಮುಖ್ ಸಂದೀಪ್ ಸಿಂಗಾಣಿ, ಜಗದೀಶ್ ತಿಂಗಳಾಡಿ, ಬಿಜೆಪಿ ಪ್ರಮುಖ ನಾಗೇಶ್ ಕೆಮ್ಮಾಯಿ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.



























