ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ನಿರ್ಮುಡದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕ ಜೂಜಾಟದ ಮೇಲೆ ಧರ್ಮಸ್ಥಳ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆಗಸ್ಟ್ 3ರಂದು ಸಂಜೆ 5.15ರ ಸುಮಾರಿಗೆ ಬೀಟ್ ಸಿಬ್ಬಂದಿಯಿಂದ ದೊರೆತ ಖಚಿತ ಮಾಹಿತಿಯ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಮರ್ಥ್ ಆರ್. ಗಾಣಿಗೇರ ನೇತೃತ್ವದ ತಂಡ ನಿರ್ಮುಡ ಪ್ರದೇಶಕ್ಕೆ ದಾಳಿ ನಡೆಸಿತು. ಈ ವೇಳೆ ಕೋಳಿಗಳ ಕಾಲುಗಳಿಗೆ ಬಾಳು (ಸಣ್ಣ ಕತ್ತಿ) ಕಟ್ಟಿ ಪರಸ್ಪರ ಕಾದಾಟಕ್ಕೆ ಬಿಡುವ ಮೂಲಕ ಹಣವನ್ನು ಪಣವಾಗಿಟ್ಟುಕೊಂಡು ಸಂಘಟಿತವಾಗಿ ಜೂಜಾಟ ನಡೆಸುತ್ತಿರುವುದು ಪತ್ತೆಯಾಯಿತು.
ಪೊಲೀಸರನ್ನು ಕಂಡ ಕೂಡಲೇ ಸ್ಥಳದಲ್ಲಿದ್ದ ಕೆಲವರು ಪರಾರಿಯಾಗಿದ್ದು, ಧರ್ಣಪ್ಪ ಗೌಡ (38), ನಿರ್ಮುಡ, ಬಂದಾರು ಗ್ರಾಮ ಹಾಗೂ ಹರೀಶ್ ಎಸ್. (30), ಬೊಳ್ಳಾರು, ನೆಕ್ಕಿಲಾಡಿ ಗ್ರಾಮ, ಪುತ್ತೂರು ತಾಲೂಕು ಅವರನ್ನು ಪೊಲೀಸರು ಬಂಧಿಸಿದ್ದಾರೆ.
ದಾಳಿಯ ವೇಳೆ ₹350 ನಗದು, ಎರಡು ಬಾಳು (ಸಣ್ಣ ಕತ್ತಿಗಳು), ವಿವಿಧ ಜಾತಿಯ ನಾಲ್ಕು ಕೋಳಿಗಳು ಹಾಗೂ ಮೂರು ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು ₹74,370 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಲಂ 112, ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 87 ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960ರ ಕಲಂ 11(1) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.




























