ಸುಳ್ಯ: ಸುಳ್ಯ ಮೆಸ್ಕಾಂ ಕಂಟ್ರೋಲ್ ರೂಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕೆಲಸದ ವಿಚಾರವಾಗಿ ಉಂಟಾದ ತಕರಾರು ಹಲ್ಲೆ ಆರೋಪದವರೆಗೆ ತಲುಪಿದ ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾದ ಎನ್‌ಸಿ (NC) ಪ್ರಕರಣವನ್ನು ಉಭಯ ಪಕ್ಷಗಳು ಪರಸ್ಪರ ರಾಜಿ ಮೂಲಕ ಇತ್ಯರ್ಥಪಡಿಸಿಕೊಂಡಿವೆ.
ಸುಳ್ಯ ನಿವಾಸಿ ರಾಘವ ಶೆಟ್ಟಿರವರು ಆಗಸ್ಟ್ 2ರಂದು ನೀಡಿದ ದೂರಿನ ಪ್ರಕಾರ, ಸುಳ್ಯ ಮೆಸ್ಕಾಂ ಕಚೇರಿಯ ಸಹಾಯಕ ಇಂಜಿನಿಯರ್ (AE) ಸುಪ್ರೀತ್ ಅವರು ಕಂಟ್ರೋಲ್ ರೂಂಗೆ ಬಂದು ಕೆಲಸದ ವಿಚಾರವಾಗಿ ವಾಗ್ವಾದ ನಡೆಸಿದ್ದು, ಈ ವೇಳೆ ತಮ್ಮ ಮೊಬೈಲ್ ಫೋನ್ ಕಿತ್ತು ನೆಲಕ್ಕೆ ಬಡಿದು ಹಾನಿಗೊಳಿಸಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ದೂರಿನ ಆಧಾರದ ಮೇಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ NC: 79/SUL/NCR/2026 ದಾಖಲಿಸಿಕೊಂಡು, ಇಬ್ಬರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಯಿತು. ಬಳಿಕ ದೂರುದಾರರು ಹಾಗೂ ಎದುರಿದಾರರು ಪರಸ್ಪರ ಮಾತುಕತೆಯ ಮೂಲಕ ವಿವಾದವನ್ನು ಬಗೆಹರಿಸಿಕೊಂಡು ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


























