ಹುಳಿಯಾರು: ಕಳೆದ ವರ್ಷ ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಛಾಯಾಗ್ರಾಹರು ಈ ವರ್ಷವೂ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳು
ಛಾಯಾಗ್ರಾಹಕರಿಗೆ ಸುಗ್ಗಿಯ ಕಾಲ ಎಂದರೆ ತಪ್ಪಾಗಲಾರದು.ವಿವಾಹ, ವಿವಾಹ ನಿಶ್ಚಯ ಇತ್ಯಾದಿ ಕಾರ್ಯಕ್ರಮಗಳು ಹೆಚ್ಚಾಗಿ ಜರುಗುತ್ತವೆ. ಜತೆಗೆ ಜಾತ್ರೆ, ದೇವರ ಉತ್ಸವಗಳೂ ಅದ್ಧೂರಿಯಾಗಿ ನಡೆಯುತ್ತವೆ. ಹಾಗಾಗಿ ಈ ಎರಡು ತಿಂಗಳುಗಳಲ್ಲಿ ಬಿಡುವಿಲ್ಲದಂತೆ ಕೆಲಸಗಳೂ ದೊರೆಯುತ್ತವೆ.
ಆರ್ಥಿಕವಾಗಿಯೂ ಉತ್ತಮಗೊಳ್ಳಲು ಛಾಯಾಗ್ರಹಕರಿಗೆ ಒಳ್ಳೆಯ ಕಾಲ ಇದಾಗಿದೆ. ಇಡೀ ವರ್ಷ ಪೂರ್ತಿ ಬದುಕು ಸಾಗಿಸಲು ಈ ಅವಧಿಯ ದುಡಿಮೆ ಛಾಯಾಗ್ರಾಹಕರಿಗೆ ಅತೀ ಮುಖ್ಯವಾಗಿರುತ್ತದೆ. ಕೊರೊನಾ: ಛಾಯಾಗ್ರಾಹಕರಿಗೆ ಈ ವರ್ಷವೂ ಬರೆ ಹಾಕಿದೆ. ಆದರೆ ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ಕೊರೊನಾ ಕಠಿಣ ನಿಯಮ ತೊಡಕಾಗಿದ್ದು ಛಾಯಾಗ್ರಹಕರ ಬದುಕಿಗೆ ಪೆಟ್ಟು ನೀಡಿದೆ. ಮದುವೆಗೆ ಮುಂಚೆ ಪ್ರಿ-ವೆಡ್ಡಿಂಗ್ ಶೂಟ್ ಅಂತೇಳಿ ಅಲ್ಬಂ ಸಾಂಗ್ ರೀತಿ ನವ ವಧುವರರ ವಿಡಿಯೋ ಸಾಂಗ್ ಶೂಟ್ ಮಾಡುವುದು ಸೇರಿದಂತೆ ಮದುವೆಗೆ ವಿಡಿಯೋ, ಸ್ಪಾಟ್ ಮಿಕ್ಸಿಂಗ್, ಹೆಲಿಕ್ಯಾಮ್,
ಎಲ್‌ಇಡಿ ವಾಲ್ ಹೀಗೆ ಅನೇಕ ರೀತಿಯ ಆಕರ್ಷಕ ಸೇವೆ ಒದಗಿಸಿ ಒಂದಿಷ್ಟು ಹಣ ಗಳಿಸುತ್ತಿದ್ದರು.
ಕೊರೊನಾದಿಂದಾಗಿ ಕಲ್ಯಾಣ ಮಂಟಪಗಳಲ್ಲಿ ನಡೆಯಬೇಕಿದ್ದ ವಿವಾಹಗಳು ದೇಗುಲ ಮತ್ತು ಮನೆಗಳಿಗೆ ಸೀಮಿತವಾಗಿವೆ. ಇದರಿಂದ ಛಾಯಾಗ್ರಹಕರಿಗೆ ಕೆಲಸ ಸಿಗದೆ ಆರ್ಥಿಕ ಹೊಡೆತ ಬಿದ್ದಿದೆ. ಸ್ಟುಡಿಯೋದಲ್ಲಿ ಪಾಸ್‌ಪೋರ್ಟ್ ಪೋಟೋ ತೆಗೆಯುತ್ತಿದ್ದರು. ಈಗ ಸ್ಟುಡಿಯೋ ಬಾಗಿಲು ಹಾಕಬೇಕಿರುವುದರಿಂದ ಈ ದುಡಿಮೆಯೂ ಇಲ್ಲದಾಗಿದೆ. ಜತೆಗೆ ಮದುವೆ ಆರ್ಡರ್ ಪಡೆದು ಮಿಕ್ಸಿಂಗ್
ಯುನಿಟ್‌ನವರಿಗೆ ಕೊಟ್ಟಿದ್ದ ಅಡ್ವಾನ್ಸ್ ಹಿಂಪಡೆಯಲಾಗದೆ ತೊಳಲಾಡುವಂತಾಗಿದೆ. ಕೊರೊನಾ ನಿರ್ಬಂಧ ಕೂಲಿಕಾರರು, ವ್ಯಾಪಾರಿಗಳು ಹೀಗೆ ಎಲ್ಲ ವಲಯದಲ್ಲಿ ತೊಡಗಿರುವ ಜನರ ಮೇಲೆಯೂ ದುಷ್ಪರಿಣಾಮ ಬೀರಿದಂತೆ ಛಾಯಾಗ್ರಾಹಕರ ಮೇಲೂ ಬೀರಿದೆ. ಸರ್ಕಾರ ನಮ್ಮತ್ತ ತಿರುಗಿ ನೋಡಿ ಕಷ್ಟಕ್ಕೆ ಸ್ಪಂದಿಸುವುದೇ ಎಂದು ಛಾಯಾಗ್ರಾಹಕರು ಎದುರು ನೋಡುತ್ತಿದ್ದಾರೆ.