ಪುತ್ತೂರು : ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ ಬಿಜೆಪಿ ನಾಯಕರ ಫೋಟೋವಿದ್ದ ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಒಂಬತ್ತು ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು ಅವರಿಗೆ ಥಳಿಸಿ ದೌರ್ಜನ್ಯ ಎಸಗಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದ್ದು ಎನ್ನಲಾದ ಫೋಟೋ ಹಾಗೂ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮೇ.14ರಂದು ರಾತ್ರಿ ಪುತ್ತೂರು ಅರಣ್ಯ ಇಲಾಖೆಯ ಆವರಣ ಗೋಡೆಯ ಬಳಿ ಬಿಜೆಪಿ ಮುಖಂಡರಾದ ಡಿ. ವಿ. ಸದಾನಂದ ಗೌಡ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಭಾವಚಿತ್ರವುಳ್ಳ ಬ್ಯಾನರ್ ಅನ್ನು ಹಾಕಿ ಅದಕ್ಕೆ ಚಪ್ಪಲಿ ಹಾರ ಹಾಕಲಾಗಿತ್ತು. ಆ ಬ್ಯಾನರ್ ನಲ್ಲಿ ಬಿಜೆಪಿ ಸೋಲಿಗೆ ಕಾರಣವಾದ ನಾಯಕರಿಗೆ ಶ್ರದ್ಧಾಂಜಲಿ ಎಂದು ಬರೆಯಲಾಗಿತ್ತು. ಈ ಬಗ್ಗೆ ಪುತ್ತೂರು ನಗರ ಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಪುತ್ತೂರು ನಗರ ಠಾಣೆಗೆ ಸರ್ಕಾರಿ ಆಸ್ತಿಪಾಸ್ತಿಯನ್ನು ಮತ್ತು ಸಾರ್ವಜನಿಕ ಸ್ಥಳವನ್ನು ವಿರೂಪಗೊಳಿಸಿರುವುದಾಗಿ ದೂರು ನೀಡಿದ್ದರು. ಮೇ.15 ರಂದು ಈ ಬ್ಯಾನರ್ ಅಳವಡಿಕೆಯ ವಿರುದ್ಧ ಪುತ್ತೂರಿನಲ್ಲಿ ಬಿಜೆಪಿ ಪ್ರತಿಭಟನೆಯನ್ನು ನಡೆಸಿತ್ತು.
ನರಿಮೊಗರು ಗ್ರಾಮದ ನಿವಾಸಿಗಳಾದ ವಿಶ್ವನಾಥ್, ಮಾಧವ ಎಂಬವರನ್ನು ಮೊದಲು ವಶಕ್ಕೆ ಪಡೆದುಕೊಂಡ ಪೊಲೀಸರು ಮೇ.15 ರಂದು ರಾತ್ರಿ ನರಿಮೊಗರು ನಿವಾಸಿಗಳಾದ ಅಭಿ (ಅವಿನಾಶ್), ಶಿವರಾಮ್, ಚೈತ್ರೆಶ್, ಈಶ್ವರ್, ನಿಶಾಂತ್, ದೀಕ್ಷಿತ್, ಗುರುಪ್ರಸಾದ್ ರನ್ನು ವಶಕ್ಕೆ ಪಡೆದುಕೊಂಡಿತ್ತು. ವಿಚಾರಣೆಯ ನೆಪದಲ್ಲಿ ಪೊಲೀಸರು ವಶಕ್ಕೆ ಪಡೆದವರ ಮೇಲೆ ಹಿಗ್ಗಾಮುಗ್ಗಾ ಥಳಿಸಿ ಗಾಯಗೊಳಿಸಿದ್ದಾರೆನ್ನಲಾಗಿದೆ.
ಡಿವೈಎಸ್ಪಿ ಕಛೇರಿಯಿಂದ ಹೊರ ಬರುವ ವೇಳೆ ನಡೆದಾಡಲೂ ಕಷ್ಟ ಪಡುವ ಯುವಕರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಫೋಟೋ ಮತ್ತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪೊಲೀಸ್ ದೌರ್ಜನ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.