ಬೆಂಗಳೂರು: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಹೈಕಮಾಂಡ್ ಘೋಷಣೆ ಮಾಡಿದ್ದು, ನಾಳೆ ಅಂದರೆ ಮೇ.20 ರಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ.
ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜೊತೆಗೆ ಕೆಲವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೀಗಾಗಿ ಸಿಎಂ ಆಯ್ಕೆ ಸರ್ಕಸ್ ಬಳಿಕ ಕೈ ಪಾಳಯದಲ್ಲಿ ಸಚಿವ ಸಂಪುಟ ಕಸರತ್ತು ಶುರುವಾಗಿದ್ದು, ಆಯ್ಕೆ ಮಾಡಿರುವ ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸಿರುವ ಹಲವು ಶಾಸಕರು ಇದೀಗ ನೂತನ ಸಚಿವ ಸಂಪುಟ ಸೇರುವ ಆಶಯ ವ್ಯಕ್ತಪಡಿಸಿದ್ದಾರೆ. ಕೆಲವರು ತಮ್ಮ ಜಿಲ್ಲೆಗೆ ಹೆಚ್ಚು ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
ನಾಳೆ ಮಧ್ಯಾಹ್ನ ಕಾಂಗ್ರೆಸ್ ಕಲಿಗಳಿಗೆ ಪಟ್ಟಾಭಿಷೇಕ ನಡೆಯಲಿದೆ. ಕಂಠೀರವ ಸ್ಟೇಡಿಯಂನಲ್ಲಿ ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೇ ವೇಳೆ 28 ಶಾಸಕರು ಸಚಿವರಾಗಿ ಪದಗ್ರಹಣ ಸಾಧ್ಯತೆ ಇದೆ. ಆದ್ರೆ ಎಷ್ಟು ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎನ್ನುವುದೇ ಕೈ ನಾಯಕರು ಗುಟ್ಟಾಗೇ ಇಟ್ಟಿದ್ದಾರೆ.
2 ಡಜನ್ ಸಚಿವ ಸ್ಥಾನಕ್ಕೆ ಕಾಂಗ್ರೆಸ್ನಲ್ಲಿ 80ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದಾರೆ. ಚುನಾವಣಾ ಫಲಿತಾಂಶ ಹೊರ ಬಿದ್ದಾಗಿನಿಂದ ನಾ ಮುಂದು.. ತಾ ಮುಂದು ಅಂತ ಸಚಿವ ಸ್ಥಾನಕ್ಕಾಗಿ ಬಹಿರಂಗ ಸ್ಟೇಟ್ಮೆಂಟ್ ಕೊಡುತ್ತಿದ್ದಾರೆ. ಐದಾರು ಮಂದಿ ಡಿಸಿಎಂ ಸ್ಥಾನಕ್ಕೂ ಲಾಬಿ ಮಾಡಿದ್ರು. ಆದ್ರೆ ಒಬ್ಬರೇ ಡಿಸಿಎಂ ಎಂದು ಹೈಕಮಾಂಡ್ ಸ್ಪಷ್ಟಪಡಿಸಿದೆ. ಇತ್ತ ಪಕ್ಷದಲ್ಲಿ ಭಿನ್ನಮತ ಆಗದಂತೆ ಹೈ ನಾಯಕರೇ ಎಚ್ಚರವಹಿಸಿದ್ದಾರೆ.
ಸಂಭಾವ್ಯ ಸಚಿವರ ಪಟ್ಟಿಯನ್ನ ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ಸುರ್ಜೇವಾಲ ಹಾಗೂ ವೇಣುಗೋಪಾಲ್ ಫೈನಲ್ ಮಾಡಿದ್ದಾರೆ. ಸಿದ್ದರಾಮಯ್ಯ ಕೋಟಾದಲ್ಲಿ 10 ಮಂದಿ, ಡಿಕೆ ಶಿವಕುಮಾರ್ ಕೋಟಾದಲ್ಲಿ 10 ಮಂದಿ, ಉಳಿದ ಸ್ಥಾನಗಳನ್ನ ಹೈಕಮಾಂಡ್ ಕೋಟಾದಲ್ಲಿ ಹಂಚಿಕೆಯಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದೇ ಪಟ್ಟಿ ಹಿಡಿದು ಇಂದು ಬೆಳಗ್ಗೆ ಸಿದ್ದರಾಮಯ್ಯ ಹಾಗೂ ಡಿಕೆ. ಶಿವಕುಮಾರ್ ದೆಹಲಿ ಫ್ಲೈಟ್ ಹತ್ತಲಿದ್ದಾರೆ. ಯಾರೆಲ್ಲ ಮಂತ್ರಿ ಆಗುತ್ತಾರೆ ಎನ್ನುವುದು ಇಂದೇ ಹೊರಬೀಳುವ ಸಾಧ್ಯತೆ ಇದೆ.


























