ಮಂಗಳೂರು : ಮಂಗಳೂರಿನ ಬಜ್ಪೆ ಹಾಗೂ ಮಂಗಳೂರು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ನವೆಂಬರ್ ತಿಂಗಳಿನಲ್ಲಿ ನಡೆದ 2 ಕೊಲೆ ಯತ್ನ ಪ್ರಕರಣಗಳಿಗೆ ಸಂಬಂಧಿಸಿ 7 ಮಂದಿ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಈ ಬಗ್ಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದು, ಆರೋಪಿಗಳನ್ನು ಕಂಕನಾಡಿಯ ಅಬ್ದುಲ್ ಜಬ್ಬಾರ್ ಯಾನೆ ಮಾರಿಪಳ್ಳ ಜಬ್ಬಾರ್, ನಝೀರ್ ಅಹಮ್ಮದ್ ಪರಿಂಗಿಪೇಟೆ, ಬಿಲಾಲ್ ಮೊಯಿದ್ದೀನ್ ಫಳ್ನೀರ್, ಇಬ್ರಾಹೀಂ ಶಾಕೀರ್ ಮುಳಿಹಿತ್ಲು, ಮುಹಮ್ಮದ್ ನಿಹಾಲ್ ಅತ್ತಾವರ, ಅಬ್ಬಾಸ್ ಅಫ್ವಾನ್ ಪಾಂಡೇಶ್ವರ ಹಾಗೂ ಮುಹಮ್ಮದ್ ಅತಿಂ ಇಶಾಂ ಪಾಂಡೇಶ್ವರ ಎಂದು ಗುರುತಿಸಲಾಗಿದೆ.
ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳಾದ ನಿಝಾಮುದ್ದೀನ್, ಸಫ್ವಾನ್ ಹುಸೇನ್, ಬಾಶಿತ್ ಎಂಬವರ ಜತೆ ಸೇರಿಕೊಂಡು ಈ ಆರೋಪಿಗಳು ಇತರ ಸಹಾಯದಿಂದ ಕೊಲೆ ಯತ್ನ ನಡೆಸಿದ್ದಾರೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
2020ರ ನವೆಂಬರ್ 15ರಂದು ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಂದಾವರ ಗ್ರಾಮದ ಕಂದಾವರ ಮಸೀದಿ ಬಳಿ ಪ್ರಕರಣದ ಫಿರ್ಯಾದಿದಾರ ಅಬ್ದುಲ್ ಅಝೀಝ್‌ರವರು ರಾತ್ರಿ 10.30ರ ವೇಳೆಗೆ ಕಂದಾವರ ಮಸೀದಿಯಿಂದ ಮನೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದು ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಲಾಗಿತ್ತು. ಘಟನೆಯಲ್ಲಿ ಗಾಯಗೊಂಡಿದ್ದ ಅಬ್ದುಲ್ ಅಝೀಱ್ರನ್ನು ನಗರದ ಫಳ್ನೀರ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೈಕೆ ಮಾಡುತ್ತಿದ್ದ ಅವರ ತಂಗಿಯ ಮಗ ಮಕ್ದೂಮ್‌ರವರು ಆಸ್ಪತ್ರೆಯ ಮುಖ್ಯ ದ್ವಾರದ ಬಳಿ ಅಬ್ದುಲ್ ಅಝೀಝ್ ರ ಮಗಳ ಗಂಡ ನೌಶಾದ್ ಎಂಬವರ ಜತೆ ಮಾತನಾಡುತ್ತಿದ್ದ ವೇಳೆ ಇಬ್ಬರು ಯುವಕರು ಮಕ್ದೂಮ್ ಎಂದು ಭಾವಿಸಿ ನೌಶಾದ್‌ರಿಗೆ ತಲವಾರಿನಿಂದ ಹಲ್ಲೆ ನಡೆಸಿದ್ದರು.ಈ ಎರಡೂ ಕೊಲೆ ಯತ್ನ ಪ್ರಕರಣವು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ನಡೆದಿರುವುದಾಗಿ ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.