ಇದು ಸಾಧ್ಯವೋ, ಅಸಾಧ್ಯವೋ ನಿಮಗೆ ನಿಲುಕಿದ್ದು. ಓದುವುದಕ್ಕೋ ಕೇಳುವುದಕ್ಕೋ ಬಹಳ ಚೆನ್ನಾಗಿದೆ ಅಲ್ವೆ? ಚರ್ಮದ ಹೊದಿಕೆಯಿರುವ ಈ ಪ್ರಾಣಾತ್ಮ ರಕ್ಷಿಸಲ್ಪಟ್ಟಿರುವುದು ಭೌತಿಕ ಮೂಳೆ,ಮಾಂಸ ರಕ್ತಗಳಿಂದ ಬಿಟ್ಟರೆ ಅಂತರಂಗ ತುಂಬಿದ್ದು ಕಾಮ, ಕ್ರೋಧ, ಲೋಭ, ಮೋಹ,ಮದ, ಮತ್ಸರಗಳಲ್ಲೇ. ಮೀರಿ ಬದುಕಬೇಕು ಎಂದವರು ಇದನ್ನೆಲ್ಲಾ ತುಂಬಿಕೊಂಡವರೇ. ವಿರಕ್ತಿ ಹೊಂದಿ ಅವನ್ನೆಲ್ಲ ನಿಗ್ರಹಿಸಲು ಯತ್ನಿಸಿದ ಸಾಧಕರು ಮತ್ತೆ ಅದರ ಬಗ್ಗೆ ಮಾತನಾಡಲೇ ಇಲ್ಲ ಅದೇ ವಿಪರ್ಯಾಸ.
ದೇವರೆಂದು ಅನುಗ್ರಹಿಸುವ ಶಕ್ತಿಗಳು ಷಡ್ವೈರಿಗಳ ಏರುಪೇರುಗಳನ್ನು ಆಧರಿಸಿ ಯಾವಾಗಲೋ ಪ್ರತಿಫಲ ನೀಡುವುದು ಅನ್ಯಾಯಗಾರರಿಗೆ ಅನುಕೂಲತೆಗಳನ್ನು ಕಲ್ಪಿಸಿದೆ ಎಂದರೆ ತಪ್ಪಿಲ್ಲ. ಕೆಲವೊಮ್ಮೆ ಪೂರ್ವಜರ ಶ್ರಮದ ಫಲ ಅನುಭವಿಸುವ ಫಲಾನುಭವಿಗಳು ತನ್ನವರನ್ನು ಮರೆತು ತಾನೇ ಮಾಡಿಕೊಂಡಿದ್ದೇನೆಂಬ ಅದೃಷ್ಟಕ್ಕೆ, ನತದೃಷ್ಟರು ನಾನ್ಯಾಕೋ ಹೀಗೆ ಹುಟ್ಟಿಕೊಂಡೆ ಎಂದೂ ಅತೃಪ್ತರಾಗುತ್ತಾರೆ. ಈ ದೆಸೆಯಲ್ಲಿ ಹೆಣ್ಣೊಬ್ಬಳು ಯೋಗಾನುಯೋಗ ಎನ್ನುವಂತೆ ಹುಲುಕಡ್ಡಿಯಿಲ್ಲದಿದ್ದರೂ ವಿವಾಹಯೋಗದಿಂದ ಭಾಗ್ಯವಂತರಾಗುತ್ತಾರೆ. ಇದರಿಂದ ಕೆಲವರು ಅಲ್ಪನಿಗೆ ಐಶ್ವರ್ಯ ಬಂದಂತೆ ವ್ಯವಹರಿಸುತ್ತಾರೆ. “ದೇವರ ಭಯವೇ ಜ್ಞಾನದ ಆರಂಭ” ಎನ್ನುತ್ತಾರೆ ಬಲ್ಲಿದರು, ಆದರೆ ಆ ಭಯ ಇಲ್ಲವಾಗಿ ದೇವರಲ್ಲೂ ದೋಷ ಕಾಣುವ ಧೈರ್ಯವಂತರು ಜಗದೊಳೆಲ್ಲ ತುಳುಕುವಂತೆ ಭಾಸವಾಗುತ್ತಿದೆ.
ರಾಜ್ಯಾಡಳಿತವಿರುವ ಪರದೇಶದಲ್ಲಿ ಆಳ್ವಿಕೆಯ ಭಯಕ್ಕಾದರೂ ಜನರು ಧರ್ಮಿಷ್ಠರಾಗಿದ್ದಾರೆ, ಆದರೆ ಪ್ರಜಾಸರಕಾರವಿದ್ದು ಸನಾತನ ಧರ್ಮದ ಮೇಲೆ ನಂಬಿಕೆ ಇಟ್ಟ ಜನ ಅನಾಥರಾಗಿ ಭೀತಿ ಪಡುವಂತಾಗಿದೆ. ಸಂಸ್ಕೃತಿ, ಸಂಸ್ಕಾರ ವೇದಿಕೆಯಲ್ಲಿ ಮಾತ್ರ ಬೊಗಳೆಯಾಗಿದೆ, ಮೀಡಿಯಾ ತಂದ ಅನ್ಯ ಸಂಸ್ಕೃತಿ ನಮ್ಮದಾಗಿ ನಮ್ಮತನ ಬಿಟ್ಟು ಅನ್ಯರಂತಾಗುವಲ್ಲೇ ನಮ್ಮ ಯತ್ನವಿದೆ. “ಲೋಕಸಮಸ್ತ ಸುಖಿನೋಭವಂತು” ಎನ್ನುವುದರ ಪಳೆಯುಳಿಕೆ ಮಾತ್ರ ಉಳಿದು ಮತ್ಸರದ ಗೂಡಾಗಿ ತುಳಿದು ಬದುಕುವ ಸ್ವಾರ್ಥಿಗಳೆಂಬ ಹೆಗ್ಗಳಿಕೆಗೆ ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳಬೇಕು. “ನಹಿ ಜ್ಞಾನೇನ ಸದೃಶಂ ಪವಿತ್ರಮಿದಂ ವಿದ್ಮಹೆ ” ಈ ಪವಿತ್ರತೆ ತನ್ನ ತಿಳುವಳಿಕೆ ಪ್ರದರ್ಶನಕ್ಕೆ ಮಾತ್ರ ವಿನಿಯೋಗವಾಗಿ ಆಚರಣೆಯಲ್ಲಿಲ್ಲವೆಂಬುದೇ ನೀರಸದಾಯಕ. ಹಿರಿಯರ ಉಪದೇಶಕ್ಕೆ ಬೆಲೆ ಕೊಡೋಣವೇ? ಸಾಧ್ಯವೇ ಇಲ್ಲ, ಅವರ ಅನುಭವದ ಕೊರತೆ ನಮ್ಮನ್ನು ಹಾದಿ ತಪ್ಪಿಸುತ್ತಿದೆ ಎನಿಸುತಿದೆ.
ಇಲ್ಲೆಲ್ಲಾ ಅನ್ಯಾತ್ಮವನ್ನು ನಿಂದಿಸಿದ್ದೇನೆ ಅನಿಸುತ್ತಿಲ್ಲವೇ? ಕಾರಣವೆಂದರೆ ನಂಬಿ ಕೆಟ್ಟು ಅನಾಥವಾಗಿ ಅನುಭವಿಸುತ್ತಿದ್ದೇನೆ. ಇನ್ನೂ ನನ್ನ ಸೋಲನ್ನೇ ಕಾದು ತೃಪ್ತರಾಗುವ ನನ್ನವರಿದ್ದಾರೆ, ನಾನು ದೇವರಂತೆ ಕಂಡರೂ ನಾನು ಅವರಿಗೆ ರಾಕ್ಷಸನಂತೆ ಕಾಣುತಿದ್ದೇನೆ. ದೇವರು ಒಳ್ಳೆ ಬುದ್ದಿ ಶಕ್ತಿ ಕೊಡಲೆಂದು ಬೇಡಿದರೆ, ಅವನಿಗೂ ಅಸಾಧ್ಯವೆಂಬಷ್ಟು ಮೀರಿ ಹೋಗಿದೆ. ಇದೆಲ್ಲ ನಿಮಗೂ ಅನುಭವ ವೇದ್ಯವಾಗಿ, ತೃಪ್ತರಾಗುವುದಕ್ಕೆ ಒಂದೇ ದಾರಿ ಏನೆಂದರೆ “ನಾನು ಅವರಿಷ್ಟದ ಹಾಗಿಲ್ಲ, ನನ್ನದೇ ತಪ್ಪಿರಬಹುದು ಎಂದು ಸುಮ್ಮನಿದ್ದು, ಅನ್ಯತೆಯ ಬಗ್ಗೆ ಯೋಚಿಸುವುದು ಅಷ್ಟೇ.
🖊️ರಾಧಾಕೃಷ್ಣ ಎರುಂಬು