ಸರಕಾರದ ಆದೇಶದಲ್ಲಿ ಶಾಲಾರಂಭ ಒಂದು ಹಬ್ಬವಾಗಬೇಕು. ಚಿಣ್ಣರ ಕಲಿಕಾರಂಭದ ಸಂಭ್ರಮ. ಶಾಲೆ ತಳಿರು ತೋರಣದ ಸಿಂಗಾರವಾಗಬೇಕು ಅದಕ್ಕಾಗಿಯೇ ಒಂದೆರಡು ದಿನ ಮುಂಚಿತವಾಗಿ ಶಿಕ್ಷಕರ ಗಮನ ಶಾಲೆಯತ್ತ ಇರಬೇಕೆಂಬ ಯೋಚನೆ ತಜ್ಞರದ್ದು. 2023-24ರಲ್ಲಿ ದಾಖಲೆ ಎನ್ನುವಂತೆ ಹೊಸ ಪುಸ್ತಕ, ಸಮವಸ್ತ್ರ, ಬಿಸಿಯೂಟ ಗಳ ಪೂರೈಕೆ ಮುಂಚಿತವಾಗಿ. ಬಣ್ಣ ಬಳಿಸಿಕೊಂಡ ಶಾಲಾ ಕಟ್ಟಡ, ಭದ್ರ ಪಡಿಸಿಕೊಂಡ ಛಾವಣಿ ಇತ್ಯಾದಿ. ದತ್ತು ಪಡೆದುಕೊಂಡು ಹೊಸ ಆಯಾಮಗಳ ಜೊತೆ ಕೆಲವು ಸರಕಾರಿ ಶಾಲೆಗಳು. ಹಳದಿ ಬಣ್ಣ ಬಳಿಸಿಕೊಂಡ ಖಾಸಗಿಯವರ ಬಸ್ಸುಗಳು ಸರಕಾರಿ ಶಾಲೆಗೂ, ಹೀಗೆ ನಡೆದಿದೆ ಸಿದ್ಧತೆ.
ಭಾವುಕತನದ ಸಿದ್ಧತೆ ಭಾವನೆಗಳನ್ನು ಒತ್ತಡಕ್ಕೆ ಸಿಲುಕಿಸಿ ಮಣಿಸಿವೆ ಎಂದನಿಸುತಿದೆ. 30ವರ್ಷಗಳ ಹಿಂದಿನ ಬಾಲ್ಯದ ಶಾಲಾರಂಭ ಇಂದು ನೆನೆಗುದಿಗೆ ಬಿದ್ದಿವೆ. ಸುದೀರ್ಘ ಬೇಸಿಗೆಯಲ್ಲಿಯ ರಜಾ ದಿನ ಎಪ್ರಿಲ್ 11ಕ್ಕೆ ಅಜ್ಜಿ ಮನೆಯಿಂದ ಆರಂಭವಾದರೆ ಮುಗಿದು ಸ್ವಂತ ವಾಸ್ತವ್ಯಕ್ಕೆ ಬರುವುದು ಮೇ 29ಕ್ಕೆ. ಎಷ್ಟೆಲ್ಲ ಸಂಭ್ರಮ ಈ 49ದಿನಗಳು. ಅವರಿವರು ಕೊಟ್ಟ ಬೀಡಿಕಾಸು,ರೂ 200ರ ಒಳಗಿನ ಪುಸ್ತಕಕ್ಕೆ, ಶಾಲಾ ಶುಲ್ಕಕ್ಕೆ ರೂ 47.75 ಕ್ಕೆ ಸಾಕಾಗುತಿತ್ತು. ಅಜ್ಜಿ ಮನೆಯಲ್ಲಿ ನನ್ನಂತೆ ಬಂದ ಮಕ್ಕಳಸೇನೆಯ ಸಂಭ್ರಮವಿತ್ತು. ಗೇರು, ಮಾವು, ಕುಂಟಲ, ನೇರಳ ಹಣ್ಣಿನ ಘಮಘಮ, ಬಿಸಿಲಲ್ಲೇ ದಿನವೆಲ್ಲ ಇದ್ದರೂ ಬೆವರುಯುಕ್ತ ಮುಖ ಕಂಡು ಯಾರೇನೇ ಅಂದರೂ ಆಯಾಸವಿರದ ಸಂಭ್ರಮ. ಜಾತ್ರೆ,ಆಟಕೂಟ, ನೇಮ, ತಂಬಿಲ ಮುಗಿಸಿ ಸರಳ ಊಟವಿದ್ದರೂ ಮೃಷ್ಟಾನ್ನದಂತಿತ್ತು. ಸಂಜೆ ಅಮ್ಮನ ಬದಲಿಗೆ ಚಿಕ್ಕಮ್ಮ, ಅಜ್ಜಿ ಮಾಡಿಸುತಿದ್ದ ಸ್ನಾನ, ಊಟ, ನಿದ್ದೆ ಅಮ್ಮನ ಮನೆಯ ನೆನಪು ಮಾಡಿದ್ದರೂ ಅವರ ವಿಶೇಷ ಆರೈಕೆ ಎಲ್ಲ ಮಾಯಗೊಳಿಸುತಿತ್ತು. ಆಟಕ್ಕೆ ಮೊಬೈಲ್ ಇದ್ದಿಲ್ಲ, ಹಳೆಯ ಟಯರು, ಪರಿಸರದ ಸರಸರದ ಆಟಿಕೆ ಮುದಗೊಳಿಸುತಿತ್ತು. 30ವರ್ಷದ ಹಳೆಯ ಆ ನೆನಪು ಈಗಲೂ ಆ ಊರಿಗೆ ಹೋದಾಗ ಅಲ್ಲಿನ ನೆರೆಯವರು ನೆನಪಿಸುವಷ್ಟು ತುಂಟಾಟವಿದ್ದರೂ ಮತ್ತೆ ಹಾಗಾಗೋಣ ಎನಿಸಿದೆ. ಮರಳಿ ನನ್ನ ಮನೆಗೆ ಬಂದಾಗ ಮಳೆಬಿದ್ದು ವಾತಾವರಣವೇ ಭಿನ್ನವಾಗಿ ಹೊಸ ಮನೆಯ ಸಂಭ್ರಮ ಕೊಡುತಿತ್ತು.
ಆದರೆ ಈಗಿನ ನನ್ನ ಮಕ್ಕಳನ್ನು ಅಜ್ಜಿ ಮನೆಗೆ ಕಳಿಸುವುದಕ್ಕೆ ಭಯ. ಈ ಮಕ್ಕಳು ಹೊರಡುವುದೇ ಇಲ್ಲ ಇದು ಇನ್ನೊಂದು. ಮೊಬೈಲ್,ಟಿವಿ ಇರುವ ರೂಮಿನ ಪ್ರಪಂಚ ಇವರ ಬೇಸಿಗೆಯಲ್ಲಿನ ಬದುಕು. ಒಂದೆರಡು ವಾರ ಬೇಸಿಗೆ ಶಿಬಿರ ಬಿಟ್ಟರೆ ಇನ್ನೇನು ಇಲ್ಲ. ಮಕ್ಕಳು ಮನೆಯಲ್ಲಿ ಸುಮ್ಮನಿದ್ದರೆ, ತಡೆಯಲಾಗದ ಹಿರಿಯರಾದ ನಾವು ಮುಂದಿನ ವರ್ಷದ ಸಿದ್ಧತೆ ಮಾಡಿರೆಂಬ ಒತ್ತಡ ಹೇರುವುದು. ಮನೆಯಲ್ಲಿರಲಾಗದ ಅಪ್ಪ ಅಮ್ಮಂದಿರು ಮನೆಯೆಂಬ ಕಾರಾಗ್ರಹದೊಳಗೆ ಸಂಜೆ ವರೆಗೆ ಕೂಡಿ ಹಾಕಿ ಸಂಜೆ ಬಂದಮೇಲೆ ಹೊರಗೆ ಬಿಡುವ ಪ್ರಮೇಯ. ಈಗಿನ ಮಕ್ಕಳ ಮೇಲೆ ನಾವು ತೋರಿಸುವ ಅತಿ ಪ್ರೀತಿ, ಇಡೀ ದಿನ ನಾವು ನೀಡಿದ ಮೊಬೈಲ್, ಟಿವಿ ನಮ್ಮ ಮಕ್ಕಳನ್ನು ಹಾದಿ ತಪ್ಪಿಸದೆ ಇದ್ದೀತೆ ಹೇಳಿ.ಇಷ್ಟು ಸಾಕೆನಿಸುತ್ತದೆ ಬೇಸಿಗೆಯ ಸಂಭ್ರಮ. ಏನಿದ್ದರೂ ಅದೇ.ನಮ್ಮ ಕಂದಮ್ಮಗಳಿಗೆ ಹೊಸತನದ ಅನುಭವದ ಕೊರತೆ ಕಾಣಿಸಿದ ಕಟುಕರು ನಾವು ಅಷ್ಟೇ ಹೇಳಬೇಕು.
ಈಗಿನ ಮಗು ಒಮ್ಮೆ ಶಾಲೆ ಆರಂಭವಾದರೆ ಸಾಕು, ಈ ಜೈಲೆಂಬ ಮನೆಯಿಂದ ಹೊರಬಿದ್ದರೆ ಸಾಕೆಂಬ ತವಕದಿಂದ ಇದೆ. ಇಂದಿನ ಮಗುವಿಗೆ ನಾಳೆಯ ಶಾಲೆಗೆ ಹೋಗುವ ತವಕ ಮಾತ್ರ. ಮಿಕ್ಕಿದ ಶಾಲಾ ಆಯ್ಕೆ, ಶುಲ್ಕ, ವಾಹನ,ಪುಸ್ತಕ, ಸಮವಸ್ತ್ರ, ಇನ್ನೆಲ್ಲ ಸಿದ್ಧತೆಗಳ ಹಾರಭಾರ ಪೂರ್ಣ ಜವಾಬ್ಧಾರಿ ಹೆತ್ತವರದ್ದು. ಯಾರು ಮಗುವಿಗೆ ಆ ಬಗ್ಗೆ ಸ್ವಾತಂತ್ರ ಕೊಟ್ಟೇ ಇಲ್ಲ. ಸರಕಾರಿ ಶಾಲೆಯಾದರೆ ಹೊರೆ ಕಡಿಮೆ, ಇಲ್ಲವಾದರೆ ಕೆಲವರ ಮೂರು ತಿಂಗಳ ಸಂಬಳ ಒಂದು ಮಗುವಿಗೆ ಮೀಸಲಿರಿಸಬೇಕಾದ ಅನಿವಾರ್ಯತೆ. ಮಾತ್ರವಲ್ಲ, ಸೀಟಿಗಾಗಿ ಕಾಡುವುದು ಬೇಡುವುದು, ಶಾಲಾ ವಾಹನ ಯೋಚನೆ, ಜೊತೆಗೆ ಆಚೆ ಮನೆಯ ಮಗುವಿನಂತೆ ಹೊಂದಿಸಿಕೊಳ್ಳುವ ತಾಕಲಾಟ. ಮಗುವಿಗೆ ಯಾವ ಭಾವನೆಯು ಇಲ್ಲದೆ ಬೊಂಬೆಯಂತೆ ಪುಸ್ತಕದ ಹೊರೆ ಹೊತ್ತು ಶಾಲಾ ವಾಹನ ಏರಿ ಒಮ್ಮೆ ಶಾಲೆಗೆ ಹೋಗಿ ಗೆಳೆಯರನ್ನು ಸೇರುವ ಆಸೆ ಅಷ್ಟೇ. ಇದಿಷ್ಟು ಹೆತ್ತವರದ್ದಾದರೆ ಶಿಕ್ಷಕರು, ಮೌಲ್ಯಮಾಪನ, ಚುನಾವಣೆ, ತರಬೇತಿ, ವಿದ್ಯಾರ್ಥಿಗಳ ದಾಖಲಾತಿಯ ಮದ್ಯೆ 45 ದಿನಗಳ ಬಿಡುವು ಮಾಯ, ತವರುಮನೆ, ಗಂಡ – ಮಕ್ಕಳೊಂದಿಗೆ ಎಲ್ಲಾದರೂ ಹೋಗಿ ಬರೋಣವೆಂಬ ತವಕ ಭಗ್ನ, ವಿಶೇಷ ತಿಂಡಿ ತಿನಿಸು ತಯಾರಿಗೆ ತಿಲ, ಶಾಲಾರಂಭದ ಶಾಲಾ ಒತ್ತಡ ಹೀಗೇ ಎಲ್ಲವೂ ಅರೆಬರೇ ಮಾಡಿಕೊಂಡು ಒಟ್ಟು ಮನೆಯೊಳಗೂ, ಶಾಲೆಯೊಳಗೂ ನೆಮ್ಮದಿಯ ದೀರ್ಘ ಉಸಿರಾಟ ಮಾಡಲಾಗದ ಭಾರ ಮನಸಿನಲ್ಲಿ ಬಂದ ಶಾಲಾರಂಭದ ಸಂಭ್ರಮ ಶಿಕ್ಷಕನದ್ದು. ಶಾಲಾಡಳಿತಕ್ಕೆ ಒಂದೇ ತವಕ ಕಳೆದ ವರ್ಷದಷ್ಟಾದರೂ ಮಕ್ಕಳ ದಾಖಲಾತಿ ಸಾಧ್ಯವೇ? ಹೊಸ ಭರವಸೆಗಳೇನು ನೀಡಬಹುದು? ಹೊಸತನವೇನು ನೀಡಬೇಕು? ಶಿಕ್ಷಕರ ತಯಾರಿ ಹೇಗಿರಬೇಕು? ಶಾಲೆಯ ಮೂಲಭೂತ ಸೌಕರ್ಯಗಳೇಗಿರಬೇಕು? ವಿದ್ಯಾರ್ಥಿಗಳಿಗೆ ಅನ್ಯರು ನೀಡಿರದ ವಿಶೇಷ ಸೌಕರ್ಯ ಏನು ಕೊಡಬಹುದು? ಆಯ ವ್ಯಯಗಳ ಚಿಂತೆ, ಪೋಷಕರ ಸಮಸ್ಯೆಗಳಿಗೆ ಪರಿಹಾರ ಹೇಗೆ? ಇವುಗಳೆಲ್ಲದರ ಮದ್ಯೆ ಶಾಲಾ ಪ್ರಾರಂಭೋತ್ಸವ. ಈ ಬಾರಿ ಮಳೆಯೇ ಇಲ್ಲದೆ ನೀರಿಲ್ಲದ ದೊಡ್ಡ ಚಿಂತೆ ಮೇಲ್ಕಾಣಿಸಿದ ಎಲ್ಲರಿಗೂ. ಅವೆಲ್ಲದರ ಇಂಗಿತಗಳ ಮದ್ಯೆ ಇಂದು ಶಾಲಾ ಆರಂಭೋತ್ಸವ. ಎಲ್ಲ ಪುಟಾಣಿಗಳಿಗೆ ಆರೋಗ್ಯ, ಸೌಕರ್ಯಗಳ ಜೊತೆ ಒಳ್ಳೆಯ ನೈತಿಕ ಶಿಕ್ಷಣ ಸಿಗಲೆಂಬುದೇ ಆಶಯ.
🖊️ರಾಧಾಕೃಷ್ಣ ಎರುಂಬು