ಪುತ್ತೂರು : ವ್ಯಕ್ತಿಯೋರ್ವ ಬಸ್ ನಿರ್ವಾಹಕನಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಠಾಣೆಗೆ ದೂರು ನೀಡಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಬಾಗಲಕೋಟೆ ಮೂಲದ ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕ ತುಳಸಿಗೇರಿ ಮನಾದಗಿ ಎಂಬವರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಠಾಣೆಯಲ್ಲಿ ಮಹಮ್ಮದ್ ಸಲಾಂ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ತುಳಸಿಗೇರಿ ಮನಾದಗಿ ರವರು ಧರ್ಮಸ್ಥಳ ಕೆ.ಎಸ್. ಆರ್. ಟಿ.ಸಿ ಘಟಕದಲ್ಲಿ ಚಾಲಕ ಕಂ ನಿರ್ವಾಹಕರಾಗಿದ್ದು, ಜೂ.1 ರಂದು ಕೆ.ಎಸ್. ಆರ್.ಟಿ.ಸಿ ಬಸ್ ನಲ್ಲಿ ನಿರ್ವಾಹಕನಾಗಿದ್ದುಕೊಂಡು ಗಾಳಿಮುಖದಿಂದ ಹೊರಟು ಮದ್ಯಾಹ್ನ ವೇಳೆಗೆ ಪುತ್ತೂರು ಕೆ.ಎಸ್. ಆರ್.ಟಿಸಿ ಬಸ್ ನಿಲ್ದಾಣಕ್ಕೆ ತಲುಪಿದಾಗ ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಜನರು ಇಳಿಯುತ್ತಿದ್ದಾಗ ಒಬ್ಬಾತನು ಏಕಾಏಕಿಯಾಗಿ ಬಸ್ಸನ್ನು ಹತ್ತಲು ಪ್ರಯತ್ನಿಸಿದನು. ಆಗ ತುಳಸಿಗೇರಿ ರವರು ಆತನಿಗೆ ಜನರು ಇಳಿದ ನಂತರ ಬಸ್ಸನ್ನು ಹತ್ತುವಂತೆ ತಿಳಿಸಿದ್ದು , ಆ ಸಮಯ ಆತನು ಏಕಾಏಕಿಯಾಗಿ ಕೋಪಗೊಂಡು ತುಳಸಿಗೇರಿ ರವರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಆತನ ಕೈಯಿಂದ ತುಳಸಿಗೇರಿ ರವರ ಮೂಗಿಗೆ, ತುಟಿಗೆ ಹಲ್ಲೆ ನಡೆಸಿ, ನಂತರ ತುಳಸಿಗೇರಿ ರವರು ಧರಿಸಿದ್ದ ಶರ್ಟ್ ಕಾಲರ್ ನ್ನು ಹಿಡಿದು ಎರಡೂ ಕಾಲಿನ ತೊಡೆಗೆ ಒದ್ದಿದ್ದು, ಆ ಸಮಯ ತುಳಸಿಗೇರಿ ರವರು ಜೋರಾಗಿ ಬೊಬ್ಬೆ ಹಾಕಿದಾಗ ಬಸ್ ನಿಲ್ದಾಣದ ಟಿಸಿಯವರು ಬಂದು ಹಲ್ಲೆ ಮಾಡುವುದನ್ನು ತಡೆದರು. ಆ ವೇಳೆ ಆ ವ್ಯಕ್ತಿಯು ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ: 45/2023 ಕಲಂ: 353, 332, 504 ಐ.ಪಿ.ಸಿ ರಂತೆ ಪ್ರಕರಣ ದಾಖಲಾಗಿದೆ.

























