ಪುತ್ತೂರು : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ವತಿಯಿಂದ ಪುತ್ತೂರಿನ ಜಿಡೆಕಲ್ಲಿನಲ್ಲಿ ಕಳೆದ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ‘ಪುತ್ತೂರು ಹಾಲು ಶೀಥಲೀಕರಣ ಕೇಂದ್ರ’ವು ಮೇ.31ಕ್ಕೆ ಎಲ್ಲಾ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಿದ್ದು, ಪುತ್ತೂರಿನ ಬೃಹತ್ ಸಂಸ್ಥೆಯೊಂದು ಇತಿಹಾಸದ ಪುಟ ಸೇರುವ ಲಕ್ಷಣಗಳು ಗೋಚರಿಸುತ್ತಿದೆ.

ಪ್ರಾರಂಭದಲ್ಲಿ ಎಪಿಎಂಸಿ ಪ್ರಾಂಗಣದೊಳಗೆ ಕಾರ್ಯಾಚರಿಸುತ್ತಿದ್ದ ದ.ಕ ಸಹಕಾರಿ ಹಾಲು ಒಕ್ಕೂಟದ ಶೀಥಲೀಕರಣ ಕೇಂದ್ರವು 1993 ರಲ್ಲಿ ಜಿಡೆಕಲ್ಲಿನಲ್ಲಿ ಸ್ವಂತ ನಿವೇಶನದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡು ಸುದೀರ್ಘ 30 ವರ್ಷಗಳ ಇತಿಹಾಸವನ್ನು ಈ ಕೇಂದ್ರವು ಹೊಂದಿದೆ.

ವಿಶಾಲವಾಗಿ ಸುಮಾರು ಆರು ಎಕರೆ ಸ್ವಂತ ನಿವೇಶನವನ್ನು ಹೊಂದಿದೆ. ಇಲ್ಲಿ ದಿನವೊಂದಕ್ಕೆ ಸುಮಾರು 5೦,೦೦೦ ಲೀಟರ್ ಹಾಲು ಶೀಥಲಿಕರಣಗೊಳಿಸುವ ಮೂರು ಬೃಹತ್ ಟ್ಯಾಂಕ್‌ಗಳು, ಇದಕ್ಕೆ ಪೂರಕವಾದ ಯಂತ್ರೋಪಕರಣಗಳು, ಎರಡು ಬೃಹತ್ ಜನರೇಟರ್, ಕಂಪ್ರೇಷರ್, ಲ್ಯಾಬ್‌ಗಳನ್ನು ಹೊಂದಿದೆ.
ಪ್ರಾರಂಭದಲ್ಲಿ 3೦ ಮಂದಿ ಸಿಬ್ಬಂದಿಗಳನ್ನು ಹೊಂದಿತ್ತು. ನಂತರ ಇಳಿಕೆಯಾಗುತ್ತಾ ಪ್ರಸ್ತುತ ದಿನಗಳಲ್ಲಿ 17 ಮಂದಿ ಸಿಬ್ಬಂದಿಗಳು ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಕೇವಲ 4 ಮಂದಿ ಮಾತ್ರ ಖಾಯಂ ಸಿಬಂದಿಗಳಾಗಿದ್ದಾರೆ. ಉಳಿದ 13 ಮಂದಿ ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೇಂದ್ರವು ಪ್ರಾರಂಭಗೊಂಡ ದಿನಗಳಲ್ಲಿ ಪುತ್ತೂರು, ಸುಳ್ಯ, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕುಗಳ 70 ಹಾಲು ಉತ್ಪಾದಕರ ಸಹಕಾರಿ ಸಂಘಗಳಿಂದ ಸುಮಾರು 6೦,೦೦೦ ಲೀಟರ್ ಹಾಲು ಪುತ್ತೂರು ಕೇಂದ್ರಕ್ಕೆ ಸರಬರಾಜು ಆಗಿ ಇಲ್ಲಿ ಹಾಲು ಶೀಥಲೀಕರಣಗೊಂಡು ಮಂಗಳೂರಿನ ದ.ಕ ಹಾಲು ಒಕ್ಕೂಟಕ್ಕೆ ಸರಬರಾಜು ಆಗುತ್ತಿತ್ತು.

11 ರೂಟ್‌ಗಳ ಮೂಲಕ ವಿವಿಧ ವಾಹನಗಳಲ್ಲಿ ಸಹಕಾರಿ ಸಂಘಗಳಿಂದ ಹಾಲು ಸಂಗ್ರಹಗೊಂಡು ಶೀಥಲೀಕರಣ ಕೇಂದ್ರಕ್ಕೆ ಸರಬರಾಜಾಗಿ ಇಲ್ಲಿ ಶೀಥಲಿಕರಣ ಕಾರ್ಯಗಳು ನಡೆದು ಟ್ಯಾಂಕರ್‌ಗಳ ಮೂಲಕ ಮಂಗಳೂರು ಒಕ್ಕೂಟಕ್ಕೆ ಸರಬರಾಜಾಗುತ್ತಿತ್ತು. ಕೆಲ ವರ್ಷಗಳಿಂದ ಜಿಲ್ಲೆಯ ಹಲವು ಸಹಕಾರಿ ಸಂಘ ಸಂಸ್ಥೆಗಳ ಮೂಲಕ ಆಧುನಿಕ ತಂತ್ರಜ್ಞಾನಾಧಾರಿತ ಬಲ್ಕ್ ಮಿಲ್ಕ್ ಕೂಲರ್‌ಗಳು ಪ್ರಾರಂಭಗೊಂಡಿರುವ ಹಿನ್ನೆಲೆಯಲ್ಲಿ ಜಿಡೆಕಲ್ಲಿನ ಕೇಂದ್ರಕ್ಕೆ ಸರಬರಾಜಾಗುವ ಹಾಲಿನ ಪ್ರಮಾಣ ಇಳಿಮುಖವಾಗುತ್ತಾ ಸಾಗಿದೆ. ಸ್ಥಗಿತಗೊಳಿಸುವ ಕೊನೇ ದಿನದಲ್ಲಿಯೂ 15,೦೦೦ ಲೀಟರ್ ಹಾಲು ಸಂಗ್ರಹಗೊಂಡು ಶೀಥಲೀಕರಣಗೊಂಡು ಮಂಗಳೂರಿನ ಒಕ್ಕೂಟಕ್ಕೆ ಸರಬರಾಜು ಮಾಡುತ್ತಿತ್ತು.
ವಿಶಾಲವಾಗಿ ಆರು ಎಕರೆ ನಿವೇಶನ ಹಾಗೂ ಸುತ್ತು ಆವರಣಗೋಡೆ ಹೊಂದಿರುವ ಕೇಂದ್ರದಲ್ಲಿಯೇ ಹಾಲು ಪ್ಯಾಕಿಂಗ್ ಹಾಗೂ ಪೌಡರ್ ಪ್ಲಾಂಟ್ ನಿರ್ಮಾಣಕ್ಕಾಗಿ ನೀಲ ನಕಾಶೆ ಸಿದ್ದಪಡಿಸಿ, ಒಕ್ಕೂಟದ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಎರಡು ಭಾರಿ ಗುದ್ದಲಿಪೂಜೆ ನಡೆದಿತ್ತು. ಅದಕ್ಕಾಗಿ ಒಕ್ಕೂಟದಿಂದ ಅನುದಾನವನ್ನು ನಿಗಧಿಪಡಿಸಲಾಗಿತ್ತು. ಆದರೆ ಆ ಯೋಜನೆಗಳು ಮಾತ್ರ ಇನ್ನೂ ಸಾಕಾರಗೊಂಡಿಲ್ಲ ಎಂಬ ಮಾಹಿತಿಗಳು ಲಭ್ಯವಾಗಿದೆ.

ಈ ಕೇಂದ್ರದಲ್ಲಿ ಮೇ.31ರಂದು ಎಲ್ಲಾ ರೀತಿಯ ಶೀಥಲೀಕರಣ ಕಾರ್ಯಗಳನ್ನು ಮುಕ್ತಾಯಗೊಳಿಸಿ ಜೂ.1ರಿಂದ ಸಂಪೂರ್ಣ ಸ್ಥಗಿತಗೊಳಿಸಿದೆ.
ಇಲ್ಲಿನ ಸಿಬ್ಬಂದಿಗಳನ್ನು ಮಂಗಳೂರಿನ ಒಕ್ಕೂಟದಲ್ಲಿ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಂದ ಸೂಚನೆಗಳು ಬಂದಿದೆ. ಇದರಿಂದಾಗಿ ಇಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕನಿಷ್ಠ ವೇತನದಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳು ಸಂಕಷ್ಟ ಪಡುವಂತಾಗಿದೆ. ಜೊತೆಗೆ ಸಹಕಾರಿ ಸಂಘಗಳಿಂದ 11 ರೂಟ್‌ಗಗಳ ಮೂಲಕ ಹಾಲು ಸರಬರಾಜು ಮಾಡುತ್ತಿರುವ ಖಾಸಗಿ ವಾಹನಗಳ ಮಾಲಕರು ಬರ ಎದುರಿಸುವಂತಾಗಿದೆ.
ಸಿಬ್ಬಂದಿಗಳನ್ನು ಕೈ ಬಿಡುವುದಿಲ್ಲ. ಅವರಿಗೂ ಉದ್ಯೋಗ ನೀಡಲಾಗುವುದು – ಎಸ್.ಬಿ. ಜಯರಾಮ ರೈ
ಸಹಕಾರಿ ಸಂಘಗಳಿಂದ ಸಂಗ್ರಹಿಸಿದ ಹಾಲನ್ನು ಜಿಡೆಕಲ್ಲು ಕೇಂದ್ರಕ್ಕೆ ಸಾಗಿಸಿ ಅಲ್ಲಿ ಶೀಥಲೀಕಣಗೊಂಡು ಮಂಗಳೂರಿಗೆ ಸರಬರಾಜು ಮಾಡುಬೇಕಾಗಿರುವುದರಿಂದ ಒಕ್ಕೂಟಕ್ಕೆ ಅಧಿಕ ಹೊರೆ ಬೀಳುತ್ತದೆ. ಅಲ್ಲದೆ ಹಾಲಿನ ಸಂಗ್ರಹಣೆಯೂ ಗಣನೀಯವಾಗಿ ಇಳಿಕೆಯಾಗಿದೆ. ಇದಕ್ಕಾಗಿ ಸುಳ್ಯ, ಪುತ್ತೂರು, ಬೆಳ್ತಗಂಡಿಗಳಲ್ಲಿ ವಿವಿಧ ಕಡೆಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಬಿಎಂಸಿ ಪ್ರಾರಂಭಿಸಿಲಾಗಿದ್ದು, ಅಲ್ಲಿನ ಸುತ್ತ ಮುತ್ತಲಿನ 7 ಸಂಘಗಳಿಂದ ಹಾಲು ಅಲ್ಲಿ ಸಂಗ್ರಹಗೊಂಡು ಶೀಥಲೀಕರವಾಗಿ ಟ್ಯಾಂಕರ್‌ನಲ್ಲಿ ನೇರವಾಗಿ ಒಕ್ಕೂಟಕ್ಕೆ ಸರಬರಾಜಾಗುವ ಮೂಲಕ ನಿರ್ವಹಣಾ ವೆಚ್ಚ ಕಡಿಮೆಯಾಗುತ್ತದೆ. ಇದಕ್ಕಾಗಿ ಸ್ಥಗಿತಗೊಳಿಸಲಾಗಿದೆ.
ಈಗೀರುವ ಜಿಡೆಕಲ್ಲು ಕೇಂದ್ರದ ವಿಶಾಲ ಜಾಗ ಹೊಂದಿದ್ದು ಇಲ್ಲಿ ಈ ಭಾಗದ ಹಾಲನ್ನು ಇಲ್ಲಿಯೇ ಬಳಸಿಕೊಂಡು ಪೌಡರ್ ಪ್ಲಾಂಟ್ ಹಾಲು ಪ್ಯಾಕೇಟ್ ಪ್ರಾರಂಭಿಸುವ ಯೋಜನೆಗಳಿದ್ದು ಇಲ್ಲಿಂದ ಪ್ಯಾಕೆಟ್ ಹಾಲು ಸುತ್ತ ಮುತ್ತಲಿನ ತಾಲೂಕುಗಳಿಗೆ ಸರಬರಾಜಾಗುವ ಮೂಲಕ ಸಾಗಾಟ ವೆಚ್ಚವೂ ಕಡಿಮೆಯಾಗಲಿದೆ. ಇಲ್ಲಿನ ಖಾಯಂ ಸಿಬ್ಬಂದಿಗಳನ್ನು ಮಂಗಳೂರಿಗೆ ಕರೆಸಿಕೊಳ್ಳಲಾಗಿದೆ. ಗುತ್ತಿಗೆ ಆಧಾರದ ಸಿಬ್ಬಂದಿಗಳನ್ನು ಕೈ ಬಿಡುವುದಿಲ್ಲ. ಅವರಿಗೂ ಉದ್ಯೋಗ ನೀಡಲಾಗುವುದು ಎಂದು ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಉಪಾಧ್ಯಕ್ಷರಾದ ಎಸ್.ಬಿ. ಜಯರಾಮ ರೈ ತಿಳಿಸಿದ್ದಾರೆ.
ಆಡಳಿತ ಮಂಡಳಿಯ ತೀರ್ಮಾನದಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು - ಆಡಳಿತ ನಿರ್ದೇಶಕ ಅಶೋಕ್
ಈ ಕೇಂದ್ರದಲ್ಲಿ ದಿನವೊಂದಕ್ಕೆ 9೦೦೦ ಲೀಟರ್ ಹಾಲು ಮಾತ್ರ ಸಂಗ್ರಹಗೊಂಡು ಶೀಥಲೀಕರಣಗೊಳ್ಳುತ್ತಿದೆ. ಇಲ್ಲಿನ ಯಂತ್ರೋಪಕರಣಗಳು ಸುಮಾರು 45 ವರ್ಷಗಳಷ್ಟು ಹಳೆಯದಾಗಿದೆ. ಈ ಭಾಗದಲ್ಲಿ ಸುಮಾರು 24-25ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಬಿಎಂಸಿ(ಬಲ್ಕ್ ಮಿಲ್ಕ್ ಕೂಲರ್)ನ್ನು ಅಳವಡಿಸಲಾಗಿದ್ದು, ಅಲ್ಲಿಯೇ ಹಾಲು ಶೀಥಲೀಕರಣಗೊಂಡು ಅಲ್ಲಿಂದ ಟ್ಯಾಂಕರ್‌ಗಳ ಮೂಲಕ ನೇರವಾಗಿ ಮಂಗಳೂರಿಗೆ ಸರಬರಾಜಾಗುತ್ತದೆ. ಬಿಎಂಸಿ ಆಗುವ ತನಕ ಇಲ್ಲಿನ ಕೇಂದ್ರವು ಕಾರ್ಯನಿರ್ವಹಿಸುತ್ತಿತ್ತು. ಹೀಗಾಗಿ ಜಿಡೆಕಲ್ಲು ಶೀಥಲೀಕರಣ ಕೇಂದ್ರದ ಆವಶ್ಯಕತೆ ಬೀಳುವುದಿಲ್ಲ. ಆಡಳಿತ ಮಂಡಳಿಯ ತೀರ್ಮಾಣದಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ನಿರ್ದೇಶಕರಾದ ಅಶೋಕ್ ಮಾಹಿತಿ ನೀಡಿದ್ದಾರೆ..