ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವುದರಿಂದ ತುರ್ತಾಗಿ 12 ಅಂಶಗಳ ಸೂತ್ರಗಳನ್ನು ಜಿಲ್ಲಾಡಳಿತವು ಜಾರಿಗೆ ತರಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಸರಕಾರವನ್ನು ಒತ್ತಾಯಿಸಿದೆ.
ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರನ್ನು ಭೇಟಿ ಮಾಡಿ ಈ ಕುರಿತಂತೆ ಚರ್ಚಿಸಿದೆ. ಈ ಸಂದರ್ಭ ಮಾಜಿ ಶಾಸಕ ಜೆ. ಆರ್ ಲೋಬೋ ಉಪಸ್ಥಿತಿಯಲ್ಲಿ 12 ಅಂಶಗಳ ಮನವಿ ಪಟ್ಟಿಯನ್ನು ಜಿಲ್ಲಾಧಿಕಾರಿಗೆ ನೀಡಲಾಯಿತು.
ದಕ್ಷಿಣ ಕನ್ನಡ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಕೇವಲ 75 ವೆಂಟಿಲೇಟರ್ ಗಳಿಗಳಿದ್ದರೆ, ಜಿಲ್ಲೆಯಲ್ಲಿ ಕೇವಲ 59 ವೆಂಟಿಲೇಟರ್ ಗಳು ಲಭ್ಯವಿದೆ. ಆದರೆ ಕೊರೊನಾ ಹೆಚ್ಚಿರುವ ಸಂದರ್ಭದಲ್ಲಿ ಇದು ಸಾಕಾಗುತ್ತಿಲ್ಲ ಹೀಗಾಗಿ ಎಲ್ಲಾ ಆಸ್ಪತ್ರೆಗಳಲ್ಲೂ ಸರಕಾರದ ವತಿಯಿಂದ 1000 ವೆಂಟಿಲೇಟರ್ ವ್ಯವಸ್ಥೆ ಹಾಗೂ ಕೊರೊನಾ ರೋಗಿಗಳಿಗೆ ಪ್ರತ್ಯೇಕ 10,000 ಬೆಡ್ ಗಳ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.
ಕೊರೊನಾ ರೋಗ ಉಲ್ಬಣಗೊಂಡರೆ ರೋಗಿಗಳ ಆರೈಕೆಗೆ ವೈದ್ಯರು, ನರ್ಸ್ ಗಳ ಕೊರತೆ ಕಾಡುತ್ತದೆ. ಈ ಸಂದರ್ಭದಲ್ಲಿ ವೈದ್ಯರ ಕೊರತೆ ಉಂಟಾಗದಿರಲು ನಿವೃತ್ತಿಗೊಂಡ ವೈದ್ಯರನ್ನು ನಿಯೋಜಿಸಬೇಕು. ಪಲ್ಸ, ಆಕ್ಸಿಮೀಟರ್, ಆಕ್ಸಿಜನ್ ಸಿಲಿಂಡರುಗಳ ವ್ಯವಸ್ಥೆ ಮಾಡಿಸಬೇಕು. ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ ಟೆಸ್ಟ್ ಮಾಡಿಸುವ ಪೂರಕ ವ್ಯವಸ್ಥೆ ಮಾಡಬೇಕು, ಪ್ರತಿ ಕೇಂದ್ರಗಳಲ್ಲೂ ಲಸಿಕೆ ಲಭ್ಯವಾಗುವಂತಹ ವ್ಯವಸ್ಥೆ ಮಾಡಬೇಕು. ಜನರನ್ನು ವೃದ್ಧರನ್ನು ಅಲೆದಾಡಿಸಿ ಪ್ರಾಥಮಿಕ ಕೇಂದ್ರದಲಿ ಗೊಂದಲದ ವಾತಾವರಣ ಸೃಷ್ಟಿಯಾಗದಂತೆ ಕ್ರಮ ವಹಿಸಿಕೊಳ್ಳಬೇಕು ಎಂಬಿತ್ಯಾದಿ ವಿಚಾರಗಳು ಸೇರಿದಂತೆ ಒಟ್ಟು 12 ಅಂಶಗಳ ವಿಚಾರಗಳನ್ನು ಜಿಲ್ಲಾ ಕಾಂಗ್ರೆಸ್ ಮುಂದಿಟ್ಟಿದೆ.
ಮನವಿ ನೀಡಲಾಗಿರುವ ವಿಚಾರದಲ್ಲಿ ಸೂಚಿಸಿರುವ ಅಂಶಗಳಲ್ಲಿ ಈಗಾಗಲೇ ಕೆಲವೊಂದು ನಾನು ಜಾರಿಗೆ ತಂದಿದ್ದೇನೆ ಆದರೆ ಕೆಲವು ವಿಚಾರಗಳು ಜಾರಿಗೊಳಿಸುವುದು ವಿಳಂಬವಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಾಜೇಂದ್ರ ಕೆ. ವಿ ಭರವಸೆ ನೀಡಿದರು.
ನಿಯೋಗದ ಮಾಜಿ ಶಾಸಕ ಮೊಯ್ದಿನ್ ಬಾವ, ಕಾಂಗ್ರೆಸ್ ನಾಯಕರಾದ ಎ. ಸಿ ವಿನಯರಾಜ್, ವಿಶ್ವಾಸ್ ಕುಮಾರ್ ದಾಸ್, ಶಶಿಧರ ಹೆಗ್ಡೆ, ಶಾಲೆಟ್ ಪಿಂಟೋ, ಟಿ.ಕೆ ಸುಧೀರ್,ನಾಗವೇಣಿ ಮೊದಲಾದವರು ಉಪಸ್ಥಿತರಿದ್ದರು.