ಪುತ್ತೂರು: ಕೋವಿಡ್ -19ಸಾಂಕ್ರಾಮಿಕ ರೋಗದ 2ನೇ ಅಲೆಯ ಹಿನ್ನಲೆಯಲ್ಲಿ ಸಾರ್ವಜನಿಕರ ಆರೋಗ್ಯ ಮತ್ತು ಆರ್ಥಿಕ ಹಿತದೃಷ್ಟಿಯಿಂದ ನಗರ ಸ್ಥಳೀಯ ಸಂಸ್ಥೆಗಳು 2021-22 ಸಾಲಿನ ಆರ್ಥಿಕ ವರ್ಷದ ಎಪ್ರಿಲ್ ತಿಂಗಳಲ್ಲಿ ಆಸ್ತಿ ತೆರಿಗೆ ಪಾವತಿಗೆ ನೀಡಲಾಗುತ್ತಿರುವ ಶೇ.5 ರಿಯಾಯಿತಿಯ ಕಾಲಾವಧಿಯನ್ನು ಜೂ.30ರ ತನಕ ವಿಸ್ತರಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿಗಳು ರಾಜ್ಯದ ಎಲ್ಲಾ ಸ್ಥಳೀಯಾಡಳಿತಗಳಿಗೆ ನಿರ್ದೇಶನ ನೀಡಿದ್ದಾರೆ.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮದಂತೆ ಆಸ್ತಿ ತೆರಿಗೆಯನ್ನು ಆರ್ಥಿಕ ವರ್ಷದ ಎಪ್ರಿಲ್ ತಿಂಗಳಲ್ಲಿ ಪಾವತಿಸಿದಲ್ಲಿ ಆಸ್ತಿ ತೆರಿಗೆ ಮೊತ್ತದಲ್ಲಿ ಶೇ.5ರಷ್ಟು ರಿಯಾಯಿತಿ ನೀಡಲು ಅವಕಾಶವಿತ್ತು. ಆದರೆ ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ 2021-22ನೇ ಸಾಲಿನ ಆಸ್ತಿ ತೆರಿಗೆಯ ಪಾವತಿಗೆ ನೀಡಲಾಗುತ್ತಿರುವ ಶೇ.5ರಷ್ಟು ರಿಯಾಯಿತಿ ಅವಧಿಯನ್ನು ವಿಸ್ತರಿಸಲು ಕೋರಿ ಜನಪ್ರತಿನಿಧಿಗಳು ಮತ್ತು ನಗರಸಭೆ ಸ್ಥಳೀಯ ಸಂಸ್ಥೆಗಳಿಂದ ಮನವಿ ನೀಡಿದ್ದರು. ಇದರ ಜೊತೆಗೆ ಕೋವಿಡ್ ಸೋಂಕು ಹರಡದಂತೆ ಸಾರ್ವಜನಿಕರು ಸಾಮಾಜಿಕ ಅಂತರ ಮತ್ತು ಪ್ರತ್ಯೇಕತೆಗೆ ಹೆಚ್ಚಿನ ಗಮನ ಹರಿಸಬೇಕಾಗಿದ್ದು, ಸರಕಾರವು ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿದೆ. ಆದ್ದರಿಂದ ಸಾರ್ವಜನಿಕರ ಆರೋಗ್ಯ ಮತ್ತು ಆರ್ಥಿಕ ಹಿತದೃಷ್ಟಿಯಿಂದ ಆಸ್ತಿ ತೆರಿಗೆ ಪಾವತಿಗೆ ಶೇ.5ರಿಯಾಯಿತಿಯ ಕಾಲಾವಧಿಯನ್ನು ವಿಸ್ತರಿಸಲಾಗಿದೆ.