ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಮಣಿಪುರ ಬೇಡದ್ದ ವಿಚಾರಗಳಿಗೆ ಹೆಚ್ಚು ಸುದ್ದಿಯಾಗುತ್ತಿದೆ. ಜನಾಂಗೀಯ ಹಿಂಸಾಚಾರಕ್ಕೆ ಒಳಗಾಗಿರುವ ಮಣಿಪುರದಲ್ಲಿ, ಅಮಾನುಷ ಕೃತ್ಯಗಳು ನಡೆದು ಹೋಗಿವೆ. ಇದೀಗ ಮೇ 4 ರಂದು ನಡೆದಿದೆ ಎನ್ನಲಾಗಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.
ಏನಿದು ವಿಡಿಯೋ..?
ಕಂಗ್ಪೊಕ್ಪಿ ಜಿಲ್ಲೆಯಲ್ಲಿ ಯುವತಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರಗೈದು, ಬಳಿಕ ಮೆರವಣಿಗೆ ಮಾಡಿದ ವಿಡಿಯೋ ಅದಾಗಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಯುವತಿ ಕುಕಿ ಸಮುದಾಯಕ್ಕೆ ಸೇರಿದವಳಾಗಿದ್ದಾಳೆ. ಆಕೆಗೆ ಕೇವಲ 19 ವರ್ಷ.
ಕಿಡ್ನಾಪ್ ಮಾಡಿ ವಿಕೃತಿ..!
ಪ್ರಕರಣ ಸಂಬಂಧ ದೂರು ದಾಖಲಾಗಿದ್ದು, ಮೂವರು ಮಹಿಳೆಯರು ಸೇರಿ ಒಟ್ಟು ಐವರನ್ನು ಅಪಹರಿಸಿ ವಿವಸ್ತ್ರಗೊಳಿಸಲಾಗಿದೆ. ನಂತರ 19 ವರ್ಷದ ಯುವತಿ ಮೇಲೆ ರೇಪ್ ನಡೆದಿದೆ. ಮಾತ್ರವಲ್ಲ, ಈಕೆಯ ತಮ್ಮನನ್ನು ಕೊಲೆ ಮಾಡಿದ್ದಾರೆ ಎಂದು ದೂರಲಾಗಿದೆ.
ಕೃತ್ಯವನ್ನು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಖಂಡಿಸಿದ್ದಾರೆ. ಮನುಷ್ಯತ್ವ ಅಪರಾಧದ ವಿರೋಧಿಯಾಗಿದೆ. ವಿಡಿಯೋ ಆಧಾರದ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ ಆದೇಶ ನೀಡಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ತನಿಖೆಗೆ ಆದೇಶ ಮಾಡಲಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲಿದೆ ಎಂದಿದ್ದಾರೆ.
ಆವತ್ತು ಏನಾಗಿತ್ತು ಮಣಿಪುರದಲ್ಲಿ..?
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಈ ಘಟನೆ ಬಗ್ಗೆ ಮೇ 4 ರಂದೇ ನಮಗೆ ದೂರು ಬಂದಿದೆ. ಆದರೆ ಅಪರಿಚಿತರ ವಿರುದ್ಧ ಜೂನ್ 21 ರಂದು ಗ್ಯಾಂಗ್ ರೇಪ್, ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದು ಕೊಂಗ್ಪೊಕ್ಪಿ ಜಿಲ್ಲೆಯಲ್ಲಿ ನಡೆದ ಪ್ರಸಂಗವಾಗಿದೆ ಎಂದಿದ್ದಾರೆ. ಇನ್ನು ದೂರಿನಲ್ಲಿ ದಾಖಲಾಗಿರುವ ಮಾಹಿತಿ ಪ್ರಕಾರ, ಮೇ 4 ರಂದು ಮಣಿಪುರದಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಸರಿಸುಮಾರು 800 ರಿಂದ 1000 ಮಂದಿ ಶಸ್ತ್ರಸಜ್ಜಿತವಾಗಿ ಬಂದು ಮಣಿಪುರದಲ್ಲಿ ಹಿಂಸಾಚಾರ ಮಾಡಿದ್ದರು. ಇವರು, AK ರೈಫಲ್ಸ್, ಎಸ್ಎಎಲ್ಆರ್ (SALR), ಐಎನ್ಎಸ್ಎಎಸ್ (INSAS) ಮತ್ತು 303 ರೈಫಲ್ಸ್ ಹಿಡಿದು ಗ್ರಾಮಗಳಿಗೆ ನುಗ್ಗಿದ್ದರು. ಗ್ರಾಮದಲ್ಲಿದ್ದ ಅಂಗಡಿ, ಮನೆ-ಮಠಗಳನ್ನು ಧ್ವಂಸ ಮಾಡಿ ಹಿಂಸಾಚಾರ ನಡೆಸಿದ್ದರು.
ಇದೇ ಸಂದರ್ಭದಲ್ಲಿ ಗ್ರಾಮದಲ್ಲಿದ್ದ ಐವರನ್ನು ಅಪಹರಿಸಲಾಗಿತ್ತು. ಅವರಲ್ಲಿ ಮೂವರು ಮಹಿಳೆಯರು, ಇಬ್ಬರು ಪುರುಷರು ಅಪಹರಣಕ್ಕೆ ಒಳಗಾಗಿದ್ದರು. ಪೊಲೀಸ್ ಠಾಣೆಯಿಂದ ಸುಮಾರು 2 ಕಿಲೋ ಮೀಟರ್ ದೂರದಲ್ಲಿರುವ ಕಾಡಿಗೆ ಅವರನ್ನು ಎಳೆದೊಯ್ದಿದ್ದರು. ಅಲ್ಲಿ ಅತ್ಯಾಚಾರಿಗಳ ತಂಡ ಮೊದಲು ಓರ್ವ ವ್ಯಕ್ತಿಯನ್ನು ಕೊಲೆ ಮಾಡಿದೆ. ನಂತರ ಮೂವರು ಮಹಿಳೆಯರ ನಗ್ನಗೊಳಿಸಿದ್ದಾರೆ. ಅವರ ಎದುರಲ್ಲೇ 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ನಂತರ ಆಕೆ ಸಹೋದರನ್ನೂ ಕೊಂದಿದ್ದಾರೆ. ಬಳಿಕ ಯುವತಿಯನ್ನು ಮೆರವಣಿಗೆ ಮಾಡಿದ್ದಾರೆ ಎನ್ನಲಾಗಿದೆ.
ಮೇ 3 ರಂದು ಮಣಿಪುರದಲ್ಲಿ ಹಿಂಸಾಚಾರ
ಮೇ 3 ರಂದು ಮಣಿಪುರದಲ್ಲಿ ‘ಟ್ರೈಬಲ್ ಸಾಲಿಡರಿಟಿ ಮಾರ್ಚ್’ ಹೆಸರಲ್ಲಿ ಮೇಟಿ ಸಮುದಾಯ ತಮಗೆ ಎಸ್ಟಿ (Scheduled Tribe ) ಸ್ಥಾನಮಾನ ನೀಡುವಂತೆ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತ್ತು. ದುರ್ಘಟನೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರರು ಮಂದಿ ಗಾಯಗೊಂಡಿದ್ದಾರೆ. ಮಣಿಪುರದಲ್ಲಿ 53 ಪರ್ಸೆಂಟ್ನಷ್ಟು ಮೇಟಿ ಸಮುದಾಯದ ಜನರಿದ್ದಾರೆ. ಇವರೆಲ್ಲ ಹೆಚ್ಚಾಗಿ ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ಜೊತೆಗೆ ನಾಗಾಸ್ ಮತ್ತು ಕುಕ್ಕಿಸ್ ಸಮುದಾಯ ಕೂಡ 40 ರಷ್ಟು ಮಂದಿ ಇದ್ದಾರೆ. ಇವರೆಲ್ಲ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.
























