ಆಚಾರ್ಯಾತ್ ಪಾದಮಾದತ್ತೇ
ಪಾದಂ ಶಿಷ್ಯ ಸ್ವಮೇಧಯಾ
ಪಾದಂ ಸಬ್ರಹ್ಮಚಾರಿಭ್ಯ:
ಪಾದಂ ಕಾಲಕ್ರಮೇಣ ಚ ॥
ಜ್ಞಾನವನ್ನು ಶಿಕ್ಷಕರಿಂದ ನಾಲ್ಕನೇ ಒಂದು, ಸ್ವಂತ ಬುದ್ಧಿವಂತಿಕೆಯಿಂದ ನಾಲ್ಕನೇ ಒಂದು ಸಹಪಾಠಿಗಳಿಂದ ನಾಲ್ಕನೇ ಒಂದು, ಮತ್ತು ನಾಲ್ಕನೇ ಒಂದು ಸಮಯದೊಂದಿಗೆ ಪಡೆಯಬಹುದೆಂಬುದು ಸುಭಾಷಿತದ ಅರ್ಥ.
ಸಂಸ್ಕಾರ ಎಂಬುದು ಎಲ್ಲಿಂದ ಆರಂಭವಾಗಬೇಕೆಂದರೆ ಅದು ಶಿಕ್ಷಣ, ಜ್ಞಾನಕ್ಕಿಂತ ಮೊದಲೇ ಹುಟ್ಟುತ್ತದೆ. ಮನಸ್ಸಿನಲ್ಲಿ ಹುಟ್ಟಿ ಕಾರ್ಯದಲ್ಲಿ ಪ್ರಸ್ತುತಿಯಾಗುತ್ತದೆ.
ಸಂಸ್ಕಾರ ಎಂದರೇನು.!?
ಮನುಷ್ಯ ಕಾಣುವ ಮತ್ತು ಗ್ರಹಿಸುವ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಪಡಿಯಚ್ಚು ಅವನ ಆತ್ಮ ಮತ್ತು ಮನಸ್ಸಿನ ಮೇಲೆ ಮೂಡುತ್ತವೆ. ತತ್ ಪರಿಣಾಮ ಅದು ಅವನ ಮುಂದಿನ ದಿನಚರಿಗಳಲ್ಲಿ ಗೋಚರಿಸಲ್ಪಡುತ್ತದೆ.ಆ ನಡವಳಿಕೆಗಳೇ ಸಂಸ್ಕಾರ.
ಸಂಸ್ಕಾರದ ಆರಂಭ ಯಾವಾಗ ?
ಪುರಾತನ ವೇದಗಳ ಪ್ರಕಾರ (ಇಲ್ಲಿ ವೇದ ಗ್ರಂಥಗಳಲ್ಲ, ಜ್ಞಾನ ಅಷ್ಟೇ.)ಮನುಷ್ಯ ಜನ್ಮದಲ್ಲಿ ಹುಟ್ಟಿನಿಂದ ಸಾವಿನ ವರೆಗೆ 16 ಸಂಸ್ಕಾರಗಳು. ಅದರಲ್ಲಿ 9 ಸಂಸ್ಕಾರಗಳು ವ್ಯಕ್ತಿಗೆ 3 ವರ್ಷ ತುಂಬುವಾಗಲೇ ಮುಗಿಯುತ್ತದೆ. ಅಂದರೆ ಗರ್ಭಧಾನ ಸಂಸ್ಕಾರದಿಂದಲೇ ಸಂಸ್ಕಾರದ ಆರಂಭ. ಶಿಕ್ಷಣ ಮತ್ತು ಜ್ಞಾನ ಹುಟ್ಟುವುದಕ್ಕಿಂತ ಮೊದಲೇ.
ಸಂಸ್ಕಾರ ಯಾಕೆ ಬೇಕು?
ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಗುಣಗಳ ವ್ಯತ್ಯಾಸ ಸಂಸ್ಕಾರವೆಂಬ ಮಾಪನದಿಂದ ಮಾಡಿಕೊಳ್ಳಬಹುದು. ಹುಟ್ಟು- ಬದುಕು – ಸಾವು ಇವುಗಳು ಎರಡು ವರ್ಗಕ್ಕೂ ಇದೆ. ಆದರೆ ಶ್ರೇಷ್ಟ ಜನ್ಮದ ಸಾರ್ಥಕ್ಯಕ್ಕೆ ಸಂಸ್ಕಾರ ಬೇಕು.
ಸಂಸ್ಕಾರ ಎಲ್ಲಿರುತ್ತದೆ?
ಜೀವ ಪಡೆದ ಪ್ರತಿಯೊಂದು ಜೀವಿಗಳಲ್ಲಿ ಹುದುಗಿರುತ್ತದೆ. ಶಿಕ್ಷಣ ಮತ್ತು ಜ್ಞಾನ ದೊರಕಿದಂತೆ, ದೊರಕಿದ ರೀತಿಯಲ್ಲಿ ಪ್ರಸ್ತುತಿಯಾಗುತ್ತದೆ.
ಪುರಾತನ ಮತ್ತು ಆಧುನಿಕ ಸಂಸ್ಕಾರಗಳ ವ್ಯತ್ಯಾಸವೇನು?
ಹಿಂದೆ ಇದ್ದ ಪ್ರೀತಿ, ನಂಬಿಕೆ, ಭಯ, ಗೌರವಯುತ ಬದುಕಿನಲ್ಲಿ ಸಂಸ್ಕಾರ ಸಾರಯುತ ನಡವಳಿಕೆಗಳಿಂದಿದ್ದವು. ಪ್ರಸ್ತುತ, ಸಂಸ್ಕಾರಕ್ಕಿಂತ ವ್ಯವಹಾರಿಕ ಜ್ಞಾನದ ಹೆಚ್ಚಳ ಪ್ರೀತಿ, ಗೌರವಗಳನ್ನು ಕೊಂದು ನಿಸ್ಸಾರ ಮತ್ತು ಸಸಾರಯುಕ್ತವಾಗಿದೆ.
ಸಂಸ್ಕಾರ ಮುಕ್ತ ಬದುಕಿನ ಪರಿಣಾಮವೇನು?
ಉಪ್ಪು, ಖಾರವಿಲ್ಲದ ಖಾದ್ಯಗಳಂತೆ.ಜೀವನ ಇದೆಯೋ ಎಂದರೆ ಇದೆ, ಇಲ್ಲವೆಂದರೆ ಇಲ್ಲ.
ಇವೆಲ್ಲ ಪ್ರಶ್ನೆಗಳು ಸಂಸ್ಕಾರದ ಪೀಠಿಕೆಯನ್ನು ನಮಗೆ ನೀಡಬಲ್ಲವು. ನಾವು ಸಂಸ್ಕಾರಯುತವಾಗಿ ಬದುಕುತಿದ್ದೇವೆ ಎಂದಾದಲ್ಲಿ ಅದಕ್ಕೆ ನಮ್ಮ ಹುಟ್ಟಿಗೆ ಕಾರಣರಾದ ಜನಕ-ಜನನಿಯರ ಕೊಡುಗೆ ಅಪಾರ ಎಂಬುದನ್ನು ಮರೆಯುವುದಕ್ಕಿಲ್ಲ. ಮಗು ಬೇಕು ಎಂಬ ನಿರ್ಧಾರಕ್ಕೆ ಬಂದ ಕ್ಷಣದಿಂದ ಹೆತ್ತವರ ಮನಸ್ಸಿನ ಪ್ರಭಾವ ಮಗುವಿನ ಮೇಲಾಗುತ್ತದೆ ನೆನಪಿರಲಿ. ಗಂಡು ಹೆಣ್ಣಿನ ಸಮ್ಮಿಲನ ಶರೀರದ ಸೃಷ್ಟಿಗೆ ಕಾರಣವಗಬಹುದೇ ವಿನಃ ಆತ್ಮ-ಮನಸ್ಸಿಗಿಲ್ಲ. ಉತ್ತಮ ಶರೀರದ ಸೃಷ್ಟಿಯೊಳಗೆ ಉತ್ತಮ ಆತ್ಮ-ಮನಸ್ಸು ಸೇರಿಕೊಳ್ಳುತ್ತದೆ ಅಷ್ಟೇ. ಆದ್ದರಿಂದ ಮಗು ಜನಿಸುವುದಕ್ಕಿಂತ ಮೊದಲೇ ಅಪ್ಪ- ಅಮ್ಮನ ಸಂಸ್ಕಾರದ ಪಡಿಯಚ್ಚು ಗರ್ಭದಲ್ಲೇ ಮೂಡಿರುತ್ತದೆ. (ಅಭಿಮನ್ಯು ಸುಭದ್ರೆಯ ಗರ್ಭದಲ್ಲಿ ಕೃಷ್ಣನ ಕಥೆಯನ್ನು ಗ್ರಹಿಸಿದಂತೆ)
ಆಹಾರ ಸಂಸ್ಕಾರವು (ಅನ್ನಪ್ರಾಶನ) ದೇಹಕ್ಕೊಪ್ಪುವ, ಆಹಾರ ಸಮಯ, ಒಳ್ಳೆಯ-ಕೆಟ್ಟ, ಆರೋಗ್ಯಕರ, ಪೌಷ್ಟಿಕತೆಯುಳ್ಳ ಹೀಗೆ ಉತ್ತಮ ಆಹಾರ ಸಂಸ್ಕಾರದ ಜವಬ್ದಾರಿ ಪೋಷಕರದ್ದು.ಮಗು ಕೇಳುವುದಕ್ಕಿಂತ ಹೆಚ್ಚು ನಮ್ಮ ದಿನಚರಿಯನ್ನು ಅನುಸರಿಸುತ್ತದೆ.ಇದು ಆಯುಷ್ಯ ಪೂರ್ತಿ ಆರೋಗ್ಯ ಕಾಪಾಡಬಹುದು (ಶರೀರ ಎಲ್ಲವನ್ನೂ ತುಂಬಿಸಿಕೊಳ್ಳೋ ಕಸದ ಡಬ್ಬಿಯಲ್ಲ.)
ಮಾತಿನ ಸಂಸ್ಕಾರ ಬಹಳ ಮುಖ್ಯ. ಇಲ್ಲಿ ಮನೆಯ ವಾತಾವರಣ ನೇರ ಪರಿಣಾಮ ಬೀರುತ್ತದೆ. “ಯಥಾ ರಾಜ ತಥಾ ಪ್ರಜಾ” ಎಂಬಂತೆ ಮಕ್ಕಳು ಅಪ್ಪ ಅಮ್ಮನ ಒಳ್ಳೆಯ ಮತ್ತು ಕೆಟ್ಟ ಎರಡೂ ಮಾತುಗಳನ್ನು ಅಲ್ಪ ಕಾಲದಲ್ಲೇ ಗ್ರಹಿಸಿ ಬಿಡುತ್ತದೆ. ನಿಯಮಿತ, ಸ್ಪಷ್ಟ, ಸರಳ ಸುಂದರ ಮಾತುಗಳು ಸಂಸ್ಕಾರಯುತ ಮಾತು ಕಲಿಸೋಣ.(ಕಟುಕನ ಮತ್ತು ಸಾಧುವಿನ ಮನೆಯ ಗಿಳಿಪಾಠ ನೆನಪಿಗೆ ಬರಲಿ).
ದಕ್ಷತೆ ಪ್ರಾಮಾಣಿಕತೆಯ ಸಂಸ್ಕಾರಕ್ಕೆ ಬೆಲೆ ಕೊಡೋಣ. ಹೆತ್ತವರ ಮಾನಸಿಕ ತೊಳಲಾಟ ಮಗುವಿಗೂ ಸುಳ್ಳು ಅಪ್ರಮಾಣಿಕ ವ್ಯವಹಾರವನ್ನು ಕಲಿಸಿಕೊಡುತ್ತದೆ. ಮಗು ಮನೆಯಲ್ಲಿದೆಯೆಂದರೆ ಸ್ವಲ್ಪ ಜಾಗರೂಕತೆಯಿಂದ ವ್ಯವಹರಿಸಿ. (ಉದಾಹರಣೆಗೆ ಮನೆಯಲ್ಲಿದ್ದರೂ ಇಲ್ಲ ಎಂಬುದನ್ನು ಹೇಳಲು ಕಲಿಸಿದಂತೆ)
ನಿಮ್ಮ ಸಂಸ್ಕಾರ ನಿಮ್ಮ ಮಗುವಿಗೆ ಬರಬೇಕೆ ಕನಿಷ್ಠ 3 ವರ್ಷ ನಿಮ್ಮ ಜತೆಯಿರಲಿ. ಅಪ್ಪ ಅಮ್ಮ ಇಬ್ಬರೂ ಉದ್ಯೋಗದಾತರಾದರೆ ಮಗುವಿಗೆ ಅಜ್ಜಿ (ಇದಾದರೂ ಸರಿ ) ಅಥವಾ ಬೇಬಿ ಕೇರ್ ಆಯಾ ಪೋಷಕರಾಗುತ್ತಾರೆ. ಆಗ ಮಗುವಿಗೆ ನಿಮ್ಮ ಸಂಸ್ಕಾರ ಬರಲು ಸಾಧ್ಯವೇ? ಆ ಪೋಷಕರ ಸಂಸ್ಕಾರ ಬರುತ್ತದೆ. (ಕಾಸರಕನ ಮರ ನೆಟ್ಟು ಮಾವಿನ ಹಣ್ಣು ಬಯಸಿದಂತೆ) ಯೋಚಿಸಿ.
ಶುದ್ಧತೆಯ ಸಂಸ್ಕಾರ ಚೆನ್ನಾಗಿರಲಿ. ಅದು ಶರೀರ, ಪರಿಸರ, ಮನಸ್ಸು ಮತ್ತು ದೇಹದೊಳಗೂ. ಬೇಗ ಏಳುವುದು, ಆಹಾರದ ಸಮಯ ಇವೆಲ್ಲವನ್ನು ರೂಡಿಯಾಗಿಸುವುದೇ ಬಲು ದೊಡ್ಡ ಸಂಸ್ಕಾರ ಶಿಕ್ಷಣವಲ್ಲವೇ?
ವಿನಾ ಕಾರಣ ಶಿಕ್ಷೆ ಬೇಡ, ಮಗುವಿನ ಸಮಸ್ಯೆಗಳನ್ನು ಸರಿಯಾಗಿ ಕೇಳಿಕೊಳ್ಳಿ. ಇದೇ ನಮ್ಮ ಮಗುವಿನ ಪ್ರಾಮಾಣಿಕತೆ ಮತ್ತು ಧೈರ್ಯ ಕೊಡುವ ಸಾಧನ. ಇಲ್ಲವಾದರೆ ಶಿಕ್ಷೆಗೆ ಹೆದರಿ ಎಲ್ಲವನ್ನೂ ಮುಚ್ಚಿಡಬಹುದು.
ಇವೆಲ್ಲವುಗಳ ಸರಿ ತಪ್ಪುಗಳ ಗ್ರಹಿಕೆ ಮಗುವಿನ ಅರಿವಿಗೆ ಬರಲು ವರ್ಷ 25 ಆಗುತ್ತದೆ ಮತ್ತೆ ಸರಿಪಡಿಸಿಕೊಳ್ಳುವುದು ಕಷ್ಟ. ಒಳ್ಳೆಯ ಉದ್ಯೋಗಕ್ಕಿಂತಲೂ ಮುಖ್ಯ ಒಳ್ಳೆಯ ಸಂಸ್ಕಾರ ಅದು ಬದುಕಿನ ಹಾದಿಯನ್ನೇ ಬದಲಾಯಿಸಬಲ್ಲುದು.
ಬೆಳೆಯ ಸಿರಿ ಮೊಳಕೆಯಲ್ಲಿ, ಆ ಸಿರಿಯ ಕಲ್ಪನೆ ನಮ್ಮಜತೆಗಿರಲಿ. ಕೇವಲ ಶಿಕ್ಷಣ ನೀಡುವ ಸಂಸ್ಥೆಗಳಿಂದಲೇ ಎಲ್ಲವನ್ನೂ ನಿರೀಕ್ಷಿಸುವುದಕ್ಕಾಗುತ್ತದೆಯೇ? ಶಿಕ್ಷಣ ಸಂಸ್ಥೆಯ ಸಂಸ್ಕಾರ ಎಲ್ಲರೀಗೂ ಮಾಡಿಕೊಂಡಿರುವ ಸಂಸ್ಕಾರವಾಗಿರುತ್ತದೆಯಷ್ಟೇ. ಅಲ್ಲಿ ಅಂಕ ದೊರಕಿಸಿ ಕೊಡುವ ನಿರೀಕ್ಷೆಯನ್ನೂ ನಾವು ಇಟ್ಟಿರುತ್ತೇವೆ. ಅಲ್ಲಿ ಜೀವನ ಮೌಲ್ಯದ ಪರಿಕಲ್ಪನೆ ಅಷ್ಟಕಷ್ಟೇ ಬಿಟ್ಟರೆ ಜೀವನ ಎದುರಿಸುವ ಕೌಶಲ್ಯ ಸೀಮಿತವಾಗಿರುತ್ತದೆ.
ಒಟ್ಟಾಗಿ ಸನಾತನ ಭಾರತದ ಶಿಕ್ಷಣ ಪದ್ಧತಿಯ ಅಧಿಶೀಲತೆಯ ಅವನತಿಯ ಹಾದಿಯಲ್ಲಿದೆ. ಆಂಗ್ಲರ ಶಿಕ್ಷಣನೀತಿ ತೋರಿಕೆಗೆ ಹಿತ ಕೊಡುತ್ತಿದೆ. ಸಾಮಾಜಿಕ ಮನ್ನಣೆಗೆ ಮಣೆ ಹಾಕಿ ಒಳ್ಳೆಯದು ಕೆಟ್ಟದು ಗಳೆಲ್ಲವನ್ನು ವಿಭಾಗಿಸಲಾಗದೆ ಒಂದೇ ವಾದದೊಂದಿಗೆ ಒಪ್ಪಿ ಅಪ್ಪಿಕೊಂಡಿದ್ದೇವೆ. ಸ್ವಾರ್ಥಕ್ಕಾಗಿ ನಮ್ಮ ಮೂಗಿನ ನೇರಕ್ಕೆ ಮಾತನಾಡುತಿದ್ದೇವೆ. ಇವೆಲ್ಲ ಸಂಸ್ಕಾರವೇ ಎಂಬ ಭಯಾನಕ ಪ್ರಶ್ನೆಯೇಳುತಿದೆ.
ಯಾವುದಕ್ಕೂ ನಮ್ಮ ಭದ್ರತೆಗೆ ನಮ್ಮ ಸಂಸ್ಕಾರಯುತ ಮಗುವಿರಲಿ.
🖊️ರಾಧಾಕೃಷ್ಣ ಎರುಂಬು