ಶಿಕ್ಷಣ ರಥಕ್ಕೆ ನಾಲ್ಕು ಗಾಲಿಗಳು. ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಆಡಳಿತಮಂಡಳಿ. ಇವು ಸಮಂಜಸವಾಗಿ ಸಾಗಬೇಕಾದರೆ ಎಲ್ಲವೂ ಒಂದಂನ್ನೊಂದು ಹೊಂದಿಕೊಂಡು ಸಾಗಬೇಕು ಆಗಲೇ ರತ್ನದಂತಹ ವ್ಯಕ್ತಿತ್ವವೊಂದು ಹೊರ ಬರಬಹುದು.
‘ಲಾಲಯೇತ್ ಪಂಚವರ್ಷಾಣಿ ದಶವರ್ಷಾಣಿ ತಾಡಯೇತ್ ಪ್ರಾಪ್ತೇಶು ಷೋಡಶೇ ವರ್ಷೇ ಪುತ್ರಂಮಿತ್ರವದಾಚರೇತ್’ ಎನ್ನುತ್ತದೆ ಸಂಸ್ಕೃತ ಸುಭಾಷಿತ. ಅಂದರೆ 5 ವರ್ಷಕ್ಕೆ ಮುದ್ದು, 11 ವರ್ಷಕ್ಕೆ ದಂಡನೆ , 16 ವರ್ಷಕ್ಕೆ ಮಕ್ಕಳನ್ನು ಮಿತ್ರನಂತೆ ನೋಡಬೇಕು. ಮಗುವಿನ ಜೀವನದಲ್ಲಿಯ ಅಮೂಲ್ಯ ವರ್ಷಗಳಿವು. ಆದರೆ ಅತ್ಯುನ್ನತ ಹುದ್ದೆಯನ್ನಲಂಕರಿಸಿರುವ ಮಾತಾಪಿತರು ಈ ವ್ಯವಸ್ಥೆಗೆ ಮಣೆ ಹಾಕುತ್ತಿಲ್ಲ. ಯಾಕೆಂದರೆ ಮಾನಸಿಕ, ದೈಹಿಕ ಒತ್ತಡಗಳು. ಊರೆಲ್ಲ ಸುತ್ತಿ ಇಲ್ಲಸಲ್ಲದ ವ್ಯವಹಾರ ಮಾಡುತ್ತಾ, ಮನೆಗೆ ಬಂದು ಹೆಂಡತಿಗೆ ಹೊಡೆದಂತೆ, ಅನರ್ಥ ಬದುಕಿನ ಶೈಲಿ ಮಗುವಿನ ಮುಗ್ದ ಮನಸ್ಸಿಗೆ ಆಘಾತ ತರುತ್ತದೆ. ಈ ಜಂಜಾಟದ ಬದುಕಿನಲ್ಲಿ ನಮ್ಮ ಮಗುವಿಗೆ ಹೆತ್ತವರಾಗಿ, ಪೋಷಕರಾಗಿ ನಾವು ನೀಡುವ ಸಮಯವೆಷ್ಟು? ಪ್ರಶ್ನಿಸಿಕೊಳ್ಳಿ. ಒಮ್ಮೆ 4 ವರ್ಷ ತುಂಬಿದರೆ ಸಾಕೆಂದು ಕಾದು ಶಾಲೆಯ ದಾಖಲಾತಿ ಮಾಡಿದಲ್ಲಿಗೆ ಪೋಷಕರಾಗಿ ನಮ್ಮ ಕರ್ತವ್ಯ ಮುಗಿಯಿತೆoದು ಯೋಚಿಸಿದವರೇ ಈಗಿನ ದಿನಗಳಲ್ಲಿ ಹೆಚ್ಚು. ಕಾರಣವಿಷ್ಟೇ, ಮನೆಯ ಇಬ್ಬರೂ ವೃತ್ತಿಪರರಾದರೆ ಮಾತ್ರ ಗೌರವ ಮತ್ತು ಮನೆ ವ್ಯವಹಾರ ಚೆನ್ನಾಗಿರುತ್ತದೆ ಎಂಬುದು. ಇಲ್ಲವಾದರೆ ವಿತ್ತದ ಒತ್ತಡ ತರುವಂಥಹುದೆ.ಹೀಗಾದಾಗ ಮಕ್ಕಳನ್ನು ಮನೆಯಲ್ಲಿ ಕಾಯಲು ವ್ಯವಸ್ಥೆಯಿಲ್ಲದೆ ಹೈರಾಣಾಗಿ ಶಾಲೆಗೆ ಸೇರಿಸಲು ದಿನ ಕಾಯುತ್ತೇವೆ. ಅಷ್ಟಾದರೆ ಸರಿ, ಮುಂದಕ್ಕೆ ಮಗುವಿನ ಪೂರ್ಣ ಜವಾಬ್ಧಾರಿ ಶಾಲೆ ಅಥವಾ ಶಿಕ್ಷಣ ಸಂಸ್ಥೆಯದೆಂದು ಹೆತ್ತವರು ಕೈ ತೊಳೆದುಕೊಳ್ಳುತ್ತೇವೆ.ಇದು ಎಷ್ಟರ ಮಟ್ಟಿಗೆ ಸರಿಯೆನಿಸುತ್ತದೆ, ನಿಮ್ಮನ್ನೇ ಪ್ರಶ್ನೆ ಮಾಡಿಕೊಳ್ಳಿ. ಶಾಲೆಗೆ ಅಷ್ಟೊಂದು ಶುಲ್ಕ ತೆರುತ್ತೇವೆ, ಇನ್ನು ನೋಡಿಕೊಳ್ಳುವ ಜವಾಬ್ಧಾರಿ ಶಾಲೆಯದೆಂದು ಮಗುವಿನ ಮುಗ್ದ 16 ವರ್ಷದ ಬದುಕಿನ ಜವಾಬ್ಧಾರಿಯನ್ನು ಶಾಲಾ ಶುಲ್ಕಕ್ಕೆ ಮಾರಿ ಬಿಡುತ್ತೇವೆ. ಒಳ್ಳೆಯ ಸಂಸ್ಥೆಯಾದರೆ ಸರಿ ಸಂಸ್ಕೃತಿ, ಸಂಸ್ಕಾರ ನೀಡಬಹುದು, ಹತ್ತಿರ ಶಾಲೆ ಇಲ್ಲವೆಂಬ ಅನಿವಾರ್ಯತೆಯಿಂದ ಒಟ್ಟು ಒಂದು ಶಾಲೆ ಎಂಬ ಸ್ಥಿತಿ ಬಂದರೆ ಅಯ್ಯೋ…. ಎನಿಸುತ್ತದೆ. ಹಳೆಯ ಕಾಲದ ನಮ್ಮವರು ಜ್ಞಾನ, ಸಂಸ್ಕಾರಯುತ ಬದುಕು ಬದುಕ್ಕಿದ್ದಕ್ಕೆ ಕಾರಣ ಅವರು ಬಾಲ್ಯದಲ್ಲಿ ಬೆಳೆದ ಮನೆಯ ವಾತಾವರಣ ಮತ್ತು ಅಜ್ಜಿ, ಮುತ್ತಾತರ ಪ್ರೀತಿಯ ಆರೈಕೆ ಎಂಬುದನ್ನು ಅಲ್ಲಗಳೆಯುವುದಕ್ಕಿಲ್ಲ. ಇದಕ್ಕೆ ನಿಮ್ಮ ಬದುಕೇ ಸಾಕ್ಷಿ ಎಂದಿಟ್ಟುಕೊಳ್ಳಿ, ಈಗ ನಿಮ್ಮ ಮತ್ತು ನಿಮ್ಮ ಮಗುವಿನ ಬಾಲ್ಯಗಳನ್ನೊಮ್ಮೆ ತುಲನೆ ಮಾಡಿದರೆ ಒಳಿತೆನಿಸುತ್ತದೆ. ಮಗುವಿನ ಉತ್ತಮ ಲಾಲನೆ ಪಾಲನೆಯಲ್ಲಿ ವ್ಯತ್ಯಯ ಮಾಡಿದರೆ ಅವರಿಂದ ಉತ್ತಮ ಭವಿಷ್ಯ ನಿರೀಕ್ಷಿಸಬಹುದೇ? ಕಾಸರಕನ ಮರದ ಬಳಿ ಒಳ್ಳೆಯ ಹಣ್ಣಿನ ಮರವಿದ್ದರೆ ಒಂದಂಶವಾದರೂ ಕಹಿಯನ್ನು ನಿರೀಕ್ಷಿಸಲೇ ಬೇಕಾದೀತು ಅಲ್ಲವೇ? ಇವೆಲ್ಲವೂ ಪೋಷಕನ ದುಸ್ಥಿತಿ.
ಶಾಲೆಯೆಂಬ ಪವಿತ್ರ ದೇಗುಲ ಇಂದು ಹೇಗಿದೆ? ಅದರೊಳಗಿರಬೇಕಾದ ಪಾರದರ್ಶಕತೆ , ತಿಳುವಳಿಕೆ ನೀಡಬೇಕಾದ ಗೌರವಯುತ ಗುರುಸ್ಥಾನ ಎಲ್ಲಿದೆ? ಭಗವದ್ಗೀತೆಯಂತೆ ಪವಿತ್ರತೆಯಿಂದ ಕಾಣುತಿದ್ದ ಶಾಲಾ ಪುಸ್ತಕದ ಪಾಡು, ಅವಿಶ್ರಾಂತ ಮನಸ್ಸಿನ ಬೆಳವಣಿಗೆಯ ಶಾಲಾ ವಾತಾವರಣ ಇಂದು ಹೇಗಿದೆ? ಶಿಸ್ತು, ಸ್ನೇಹ, ವಾತ್ಸಲ್ಯ ಮತ್ತು ಶಿಕ್ಷೆಗಳಿಗಿರುವ ಸುತ್ತೋಲೆಗಳ ಹತೋಟಿ ಶಾಲೆಗಳಲ್ಲೂ ಯಾಂತ್ರಿಕತೆಯನ್ನು ತಂದಿದೆ. ಮಾತನಾಡಬೇಕಾದ ಶಿಕ್ಷಕ-ಮಗುವಿನ ನಡುವೆ ಪೋಷಕರು ಮತ್ತು ಸುತ್ತೋಲೆಗಳು ಬಾಯಿ ಹಾಕುತ್ತಿವೆ. ಮತ್ತು ಪೋಷಿತ ಮಕ್ಕಳೆದುರು ಶಿಕ್ಷಕನ ಹೀಗಳೆಯುವುದು ಸರಿಯೇ? ಇದೆಲ್ಲದರ ಮದ್ಯೆಯೂ ಶಿಕ್ಷಕರು ಮೌನಿಯಾಗಿ ಕಡತಗಳಿಗೆ ಉತ್ತರಿಸುವ ಕೆಲಸ ವಿದ್ಯೆ ನೀಡುವ ಸಮಯವನ್ನು ಆಕ್ರಮಿಸುತ್ತಿದೆ. ಆದರೂ ತನ್ನ ಸ್ವಂತದ್ದೆಲ್ಲವನ್ನು ಬದಿಗಿರಿಸಿ ಒದ್ದಾಡುವ ಮನಸೊಂದು ಜತೆಗಿದೆಯೆಂಬುದು ವಿದ್ಯಾರ್ಥಿ ಪೋಷಕರು ಅರಿವಿನಲ್ಲಿರಿಸಿದರೆ ಉತ್ತಮ. ಇವೆಲ್ಲದರ ಬಗ್ಗೆ ತಲೆಕೆಡಿಸದಿರುವುದೇ ನಾವಿಂದು ನಮ್ಮ ಮಕ್ಕಳಿಂದಲೇ ಆಶ್ರಮ ಸೇರಿರುವುದಕ್ಕೆ ಕಾರಣ.ಗುರುಬ್ರಹ್ಮ ಅನ್ನುತ್ತಾರೆ.ಆದರೆ ಅದೇ ಗುರುಗಳನ್ನು ನ್ಯಾಯದ ಕಟಕಟೆಗೆ ಕರೆದೊಯ್ಯುವ ತುಚ್ಚ ಕೆಲಸ ಶಿಷ್ಯರಿಂದಾಗುತ್ತಿದೆ ಎಂಬುದೇ ಖೇದಕರ.
ಈಗಿನ ವಿದ್ಯಾರ್ಥಿಗಳು ಎಂದೂ ಹಿಂದಿನ ಪದ್ದತಿಯಂತಿರುವುದಕ್ಕಿಲ್ಲ.ಯಾಕೆಂದರೆ ಕಷ್ಟದ ಪರಿವೆಯಿಲ್ಲದ, ಹೆತ್ತವರ ಅಪರಿಮಿತ ವ್ಯಾಮೋಹದಿಂದ ಮಗು ನಿರ್ಧಾಕ್ಷಿಣ್ಯತೆಯಲ್ಲಿ ಬೆಳೆಯುತ್ತಿದೆ. ಅನುಕಂಪ, ಆತ್ಮೀಯತೆಗಳೆಲ್ಲವೂ ತರಗತಿಯೊಳಗೆ ಅಂಕಗಳ ಹೋರಾಟ, ಮತ್ತು ಅನಾರೋಗ್ಯ ಸ್ಪರ್ಧೆಗಳ ಹೆಸರಲ್ಲಿ ಹೊಂಚು ಹಾಕಿ ತಿನ್ನುತ್ತಲಿವೆ. ತನ್ನದೆಲ್ಲವೂ ಸರಿ ಎಂಬ ಅಹಂ ಸೌಮ್ಯತೆಯನ್ನೂ ಮುಕ್ಕುತ್ತಿವೆ. ಪೋಷಕರು ಮಗುವಿನ ಮಾತಿನ ಏರಿಳಿತಕ್ಕೆ ಸಾಟಿಯಾಗಿ ಮಗುವಿನ ಸುಸ್ಥಿರತೆಗೆ ಅಡ್ಡಿಯಾಗುತ್ತಿದ್ದಾರೆ.
ಇನ್ನೊಂದು ಮುಖ್ಯಭಾಗ ಸಂಸ್ಥೆಯ ಚುಕ್ಕಾಣಿ ಹಿಡಿಯುವ ಆಡಳಿತ ವರ್ಗ. ಎಲ್ಲವನ್ನೂ ನಿಭಾಯಿಸಬೇಕಾದ ಅನಿವಾರ್ಯತೆ ಹೊಂದಿದವರು. ಒಳ್ಳೆಯದಾದರೂ ಕೆಟ್ಟದಾದರೂ ಎದೆ ಸೆಟೆದು ನಿಲ್ಲಬೇಕಾದವರು. ಉಳಿದ ಮೂರು ವಿಭಾಗಕ್ಕೂ ಸಾಂತ್ವನ ಹೇಳಬೇಕಾದವರು. “ಲೋಕೋ ಭಿನ್ನ ರುಚಿ ” ಎಂಬಂತೆ ಸರ್ವಕಾಲಕ್ಕೂ ಬದಲಾವಣೆಗೆ ಹೆಣಿದು ದಣಿಯದೆ ಬದುಕಬೇಕಾದವರು ಮತ್ತು ಒಳಿತಲ್ಲಿ ತೃಪ್ತರಾಗಿರುವ ಹೊಣೆಗಾರರು ಪಾರದರ್ಶಕವಾಗಿದ್ದರೇನೇ ಚೆನ್ನ.
ಈ ಮೇಲಿನ ಹೊಂದಾಣಿಕೆಯ ನಡವಳಿಕೆಗೆ ಶಾಲೆಗಳು ನಡೆಸುವ ಪೋಷಕ-ಶಿಕ್ಷಕ-ಆಡಳಿತ ಮಂಡಳಿಗಳ ಮಿಲನ ದಾರಿದೀಪವಾಗಬಹುದೇ? ಆಗುವುದಾದರೆ ನೀವೊಬ್ಬ ಪೋಷಕನಾಗಿ ನಿಮ್ಮ ಮಗು ಒಬ್ಬ ಶ್ರೇಷ್ಠ ಗುರುವನ್ನು ಪಡೆದು ಸಂಸ್ಥೆಗೊಂದು ಹೆಮ್ಮೆತಂದು ಸಮಾಜಕ್ಕೆ ಒಳ್ಳೆಯ ವ್ಯಕ್ತಿತ್ವ ಕೊಡಲು ಸಾಧ್ಯವಾಗುವುದು.
🖊️ರಾಧಾಕೃಷ್ಣ ಎರುಂಬು