ಬಂಟ್ವಾಳ : ಕೆಲ ದಿನಗಳ ಹಿಂದೆ ವಗ್ಗ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಆಂಬ್ಯುಲೆನ್ಸ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಆ.21 ರಂದು ಮೃತಪಟ್ಟಿದ್ದಾರೆ.
ರೋಗಿಯಾಗಿದ್ದ ಅಳದಂಗಡಿ ಸನಿಹದ ಮಹಿಳೆಯನ್ನು ಮಂಗಳೂರಿಗೆ ಕೊಂಡೊಯ್ಯುತ್ತಿರುವಾಗ ಅಪಘಾತ ಸಂಭವಿಸಿ ಆಂಬ್ಯುಲೆನ್ಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದರು.
ಅಳದಂಗಡಿ ಸನಿಹದ ಬಡಗ ಕಾರಂದೂರು ಗ್ರಾಮದ ಸುಂಕದಕಟ್ಟೆ ನಿವಾಸಿ ದಿ.ಹಸನ್ ಅವರ ಪತ್ನಿ ಮರಿಯಮ್ಮ (80) ಮೃತರು.
ಶುಕ್ರವಾರ ಮಹಿಳೆಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ಇಸಿಜಿ ಸಹಿತ ತುರ್ತು ಚಿಕಿತ್ಸೆ ನೀಡಿ, ಹೃದಯನಾಳಗಳಲ್ಲಿ ಬ್ಲಾಕ್ ಇರುವುದರಿಂದ ವೈದ್ಯರು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು. ಅಂತೆಯೇ ಶಬೀರ್ ಅವರ ಆ್ಯಂಬುಲೆನ್ಸ್‌ನಲ್ಲಿ ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ವಗ್ಗ ಬಳಿ ಆಂಬ್ಯುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಚಾಲಕ ಶಬೀರ್ ತೀವ್ರ ಗಾಯಗೊಂಡು ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದರು.
ಹೃದಯದ ತೊಂದರೆ ಇದ್ದ ಮಹಿಳೆಗೆ ಅಪಘಾತದ ವೇಳೆ ತಲೆಗೆ ಗಾಯಗಳಾಗಿ ರಕ್ತಸ್ರಾವವಾಗಿತ್ತು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ವೇಳೆ ಆ್ಯಂಬ್ಯುಲೆನ್ಸ್‌ನಲ್ಲಿ ಅವರ ಜೊತೆ ಇದ್ದ ಅವರ ಪುತ್ರ ರಝಾಕ್ ಅವರ ಕೈ ಮೂಳೆ ಮುರಿತಕ್ಕೊಳಗಾಗಿದ್ದು, ಅವರು ಚಿಕಿತ್ಸೆಯಲ್ಲಿದ್ದಾರೆ. ಮೃತರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.


























