ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸೋ ಹಬ್ಬ ದೀಪಾವಳಿ. ದೀಪಗಳ ಹಬ್ಬದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸೋದು ಸಂಪ್ರದಾಯ. ಆದ್ರೀಗ ಇದೇ ಪಟಾಕಿ ಕಾರ್ಮಿಕರ ಬಾಳಿಗೆ ಕೊಳ್ಳಿ ಇಟ್ಟಿದೆ. ಹಬ್ಬಕ್ಕೂ ಮುನ್ನವೇ ಸಿಲಿಕಾನ್ ಸಿಟಿಯಲ್ಲಿ ಭೀಕರ ಪಟಾಕಿ ದುರಂತ ಸಂಭವಿಸಿದೆ.
ಹತ್ತಾರು ಮಂದಿಯನ್ನ ಸಜೀವವಾಗಿ ಆಹುತಿ ಪಡೆದಿದೆ.
ಇದು ಹಬ್ಬದ ಸಂಭ್ರಮಕ್ಕಾಗಿ ತಯಾರಾಗ್ತಿದ್ದ ಪಟಾಕಿ ಅಂಗಡಿಯ ಮಹಾದುರಂತ. ಮತ್ತೊಬ್ಬರ ಸಂತೋಷಕ್ಕಾಗಿ ತಯಾರಾಗ್ತಿದ್ದ ಪಟಾಕಿ ಶಾಪ್‌ನಲ್ಲಿ ನಡೆದಿರೋ ಘನಘೋರ ಘಟನೆ.
ಅಮಾಯಕ ಕಾರ್ಮಿಕರನ್ನ ಸಜೀವವಾಗಿ ದಹನ ಪಡೆದಿರೋ ಹೃದಯವಿದ್ರಾವಕ ಕಥಾನಕ.

ಪಟಾಕಿ ಅಂಗಡಿಯಲ್ಲಿ ಭಾರೀ ಅಗ್ನಿ ದುರಂತ
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಿನ್ನೆ ಘನಘೋರ ಅಗ್ನಿ ದುರಂತವೊಂದು ಸಂಭವಿಸಿದೆ.
ವಾಹನದಿಂದ ಪಟಾಕಿ ಆನ್‌ಲೋಡ್ ಮಾಡುವ ವೇಳೆ ಅಗ್ನಿ ಅವಘಡ ಸಂಭವಿಸಿದ್ದು, ಏಕಾಏಕಿ ಪಟಾಕಿ ಅಂಗಡಿ ಹೊತ್ತಿ ಉರಿದಿದೆ. ಈ ಪಟಾಕಿ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ 14 ಮಂದಿ ಕಾರ್ಮಿಕರನ್ನ ಅಗ್ನಿ ಆಹುತಿ ಪಡೆದಿದೆ.
ನಿನ್ನೆ ಮಧ್ಯಾಹ್ನ ನವೀನ್ ಎಂಬುವವರಿಗೆ ಸೇರಿದ ಪಟಾಕಿ ಅಂಗಡಿಗೆ ಲಾರಿಯೊಂದು ಬಂದಿತ್ತು. ಲಾರಿಯಿಂದ ಕಾರ್ಮಿಕರು ಪಟಾಕಿಯನ್ನ ಅನ್ ಲೋಡ್ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಈ ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದ ಅಂಗಡಿಗಳಿಗೂ ವ್ಯಾಪಿಸಿದ್ದು, 4 ಅಂಗಡಿಗಳು ಸುಟ್ಟು ಭಸ್ಮವಾಗಿವೆ.
ಪಟಾಕಿ ಅಂಗಡಿಯಲ್ಲಿ ಕಾರ್ಯನಿರ್ವಹಿಸ್ತಿದ್ದ 20 ಜನ ಕಾರ್ಮಿಕರ ಪೈಕಿ ಅಗ್ನಿಯ ರುದ್ರನರ್ತನಕ್ಕೆ ಸಿಲುಕಿ 14 ಮಂದಿ ಸಜೀವ ದಹನವಾಗಿದ್ದಾರೆ. ಇನ್ನೂ 4 ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. 4 ಜನ ಮಾತ್ರ ಬೆಂಕಿಯಿಂದ ಪಾರಾಗಿದ್ದಾರೆ.
ಅಗ್ನಿ ದುರಂತದಲ್ಲಿ ಕೋಟ್ಯಂತರ ಮೌಲ್ಯದ ಪಟಾಕಿ ಅಗ್ನಿಗಾಹುತಿಯಾಗಿದೆ. ಅಲ್ಲದೇ 1 ಕ್ಯಾಂಟರ್, 2 ಬೊಲೆರೋ, 4 ಬೈಕ್ಗಳು ಸಹ ಬೆಂಕಿಗಾಹುತಿ ಆಗಿವೆ. ದೊಡ್ಡ ಮಳಿಗೆಯಾಗಿದ್ದರಿಂದ ಬೆಂಕಿ ನಂದಿಸಲು ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸ ಪಡುವಂತಾಗಿತ್ತು. ಕೊನೆಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾದ್ರು. ಬಳಿಕ ಸುಟ್ಟುಭಸ್ಮವಾಗಿದ್ದ ಮೃತದೇಹಗಳನ್ನ ಹೊರತೆಗೆಯುತ್ತಿದ್ರೆ ನೋಡುಗರ ಹೃದಯ ಕಿತ್ತು ಬರುವಂತಿತ್ತು. ಸ್ಥಳದಲ್ಲಿ ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಣೆ
ಇನ್ನೂ ಅಗ್ನಿ ದುರಂತ ನಡೆದ ಅತ್ತಿಬೆಲೆಯ ಘಟನಾ ಸ್ಥಳಕ್ಕೆ ರಾತ್ರಿಯೇ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ್ರು. ಘಟನೆ ಬಗ್ಗೆ ಡಿಸಿಎಂ ಸಂಪೂರ್ಣ ಮಾಹಿತಿ ಪಡೆದ್ರು. ಡಿಕೆಶಿಗೆ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಘಟನೆ ಬಗ್ಗೆ ವಿವರಣೆ ನೀಡಿದ್ರು. ಇದೇ ವೇಳೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ನೀಡೋದಾಗಿ ಡಿಸಿಎಂ ಘೋಷಿಸಿದ್ರು.
ಈ ದುರಂತದಲ್ಲಿ ತಮಿಳುನಾಡಿನವರು ಇದ್ದರು ಎನ್ನಲಾಗಿದೆ. ಆದರೆ ಯಾರು, ಏನು ಅಂತ ಸ್ಪಷ್ಟವಾಗಿ ಇನ್ನು ಗುರುತು ಪತ್ತೆ ಹಚ್ಚಿಲ್ಲ. ಕೆಲವೊಬ್ಬರು ವ್ಯಾಪಾರಕ್ಕೆ ಬಂದವರು ಇದರಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸಿಎಂ ಜೊತೆ ಮಾತನಾಡಿ ತನಿಖೆ ಮಾಡಿಸುತ್ತೇವೆ.
ಸಿಎಂ ಮೈಸೂರಿನಿಂದ ನೇರ ಇಲ್ಲಿಗೆ ಇಂದು 10 ಗಂಟೆ ಬರುತ್ತಾರೆ. ನಾನು ಕೂಡ ಇರುತ್ತೇನೆ. ಅವರ ಕುಟುಂಬಸ್ಥರಿಗೆ, ಶವ ಸಂಸ್ಕಾರಕ್ಕೆ, ಪರಿಹಾರವಾಗಿ ತಲಾ ಕೂಡಲೇ 5 ಲಕ್ಷ ರೂಪಾಯಿಗಳನ್ನು ಸರ್ಕಾರದ ಪರವಾಗಿ ನಾನು ಘೋಷಣೆ ಮಾಡುತ್ತೇನೆ.
ಡಿ.ಕೆ.ಶಿವಕುಮಾರ್, ಡಿಸಿಎಂ

ಲೈಸನ್ಸ್ದಾರನಾಗಿದ್ದ ರಾಮ ಸ್ವಾಮಿ ರೆಡ್ಡಿ ಮತ್ತು ಅವರ ಮಗ ನವೀನ್ ರೆಡ್ಡಿ ವಶಕ್ಕೆ ಪಡೆದಿದ್ದೇವೆ. ನವೀನ್ ಕೂಡ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದೇವೆ. ತನಿಖೆ ಮಾಡುತ್ತಿದ್ದೇವೆ. ಕಾನೂನಿನ ಅಡಿ ಯಾವುದು ಕಠಿಣ ಐಪಿಎಸ್ ಪ್ರಕಾರ ಹಾಗೂ ಸ್ಫೋಟಕದ ರೂಲ್ಸ್ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ.
ರವಿಕಾಂತೇಗೌಡ, ಐಜಿಪಿ, ಕೇಂದ್ರವಲಯ
ಪಟಾಕಿ ದುರಂತ ಸ್ಥಳಕ್ಕೆ ಇವತ್ತು ಸಿಎಂ ಭೇಟಿ
ಪಟಾಕಿ ದುರಂತ ನಡೆದಿರೋ ಸ್ಥಳಕ್ಕೆ ಇವತ್ತು ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಇವತ್ತು ಸಿಎಂ ಸಿದ್ದರಾಮಯ್ಯ ದೆಹಲಿ ಪ್ರವಾಸ ಕೈಗೊಂಡಿದ್ರು. ಆದ್ರೆ, ಅಗ್ನಿ ದುರಂತ ನಡೆದ ವಿಚಾರ ಕೇಳಿ ದೆಹಲಿಯಾತ್ರೆಯನ್ನ ರದ್ದುಗೊಳಿಸಿದ್ದಾರೆ. ಇವತ್ತು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ.
ಪಟಾಕಿ ದುರಂತ ಸಂಬಂಧ ಬಾಲಾಜಿ ಕ್ರ್ಯಾಕರ್ಸ್ ಮಾಲೀಕ ರಾಮಸ್ವಾಮಿ ಮಗ ನವೀನ್‌ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಗ್ನಿ ಅವಘಡದಲ್ಲಿ ನವೀನ್‌ಗೂ ಸಣ್ಣ ಪುಟ್ಟಗಾಯವಾಗಿದ್ದು, ಆಕ್ಸ್‌ಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೊಟ್ಟೆಪಾಡಿಗಾಗಿ ಪಟಾಕಿ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಯುವಕರು ಧಗಧಗಿಸೋ ಬೆಂಕಿಯಲ್ಲಿ ಸಜೀವ ದಹನವಾಗಿರೋದು ಮಹಾ ದುರಂತವೇ ಸರಿ..



























