ಸಾಮಾಜಿಕ ಜಾಲತಾಣಗಳ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ಅನೇಕ ರೀಲ್ಸ್ ಪ್ರಿಯರು ಸಿಕ್ಕಸಿಕ್ಕಲ್ಲಿ ರೀಲ್ಸ್ ಮಾಡುತ್ತಲೇ ಇರುತ್ತಾರೆ. ಕ್ಲಿಕ್ ಆಯ್ತು ಅಂದರೆ ಸಾಕಷ್ಟು ಹೆಸರು ಬರುವುದರ ಜೊತೆಗೆ ಜೀವನವನ್ನೇ ಬದಲಾಯಿಸಿಬಿಡುತ್ತದೆ. ನಿಜ! ಆದರೆ, ಕೆಲವರು ರೀಲ್ಸ್ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡು ಲಾಕ್ ಆಗುತ್ತಾರೆ.
ಅದೇ ರೀತಿ ಗುಜರಾತ್ನಲ್ಲಿ ಒಂದು ಪ್ರಸಂಗ ನಡೆದಿದೆ. ಸಿಕ್ಕ-ಸಿಕ್ಕಲ್ಲಿ ರೀಲ್ಸ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ನಿಮ್ಮ ಪರಿಸ್ಥಿತಿಯೂ ಹಾಗೆ ಆಗುತ್ತದೆ ಯಾವುದಕ್ಕೂ ಹುಷಾರ್.
ಗುಜರಾತ್ನ ದಿನಾ ಪರ್ಮರ್ ಅನ್ನೋ ಮಹಿಳೆ ಬ್ಯುಸಿ ಇರುವ ರಸ್ತೆ ಮೇಲೆ ಯೋಗಾಸನದ ಶಾರ್ಟ್ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿ ಆಗಿದ್ದಾಳೆ.
ಜಿನುಗುತ್ತಿದ್ದ ಮಳೆಯ ನಡುವೆ ರಸ್ತೆ ಮಧ್ಯೆ ಯೋಗಾಸನ ಮಾಡಿ ಲಕ್ಷ ಲಕ್ಷ ಲೈಕ್ಸ್ ಗಳಿಸಿ, ಜನಪ್ರಿಯತೆ ಗಳಿಸಿಬೇಕು ಅನ್ಕೊಂಡು ರಸ್ತೆಗೆ ಇಳಿದಿದ್ದಳು.
ಕೆಂಪು ಬಣ್ಣದ ಡ್ರೆಸ್ನೊಂದಿಗೆ ಬಂದ ಈಕೆ ಏಕಾಏಕಿ ಯೋಗಾಸನ ಮಾಡಲು ಶುರು ಮಾಡಿದ್ದಾಳೆ. ರಸ್ತೆಯಲ್ಲಿ ವಾಹನಗಳು ಓಡಾಡುತ್ತಿದ್ದರಿಂದ ಸಂಚಾರಕ್ಕೆ ಅಡಚಣೆಯಾಗಿದೆ. ಈ ವಿಚಾರ ಗುಜರಾತ್ನ ಪೊಲೀಸರಿಗೆ ಗೊತ್ತಾಗಿದೆ. ಕೊನೆಗೆ ಆಕೆಯನ್ನು ವಶಕ್ಕೆ ಪಡೆದ ಪೊಲೀಸರು ತಪ್ಪೊಪ್ಪಿಗೆ ಬರೆಸಿಕೊಂಡಿದ್ದಾರೆ.
ಮಾತ್ರವಲ್ಲ ದಂಡವನ್ನೂ ಕಟ್ಟಿಸಿಕೊಂಡಿರುವ ಪೊಲೀಸರು, ಟ್ರಾಫಿಕ್ ರೂಲ್ ಫಾಲೋ ಮಾಡುವಂತೆ ಆಕೆಯ ಬಳಿ ವಿಡಿಯೋ ಮಾಡಿಸಿದ್ದಾರೆ. ಅದನ್ನು ಗುಜರಾತ್ ಪೊಲೀಸರು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿದ್ದಾರೆ. ಗುಜರಾತ್ ಪೊಲೀಸರ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


























