ಉಡುಪಿ : ನೇಜಾರಿನ ಹಂಪನಕಟ್ಟೆ ಸಮೀಪದ ತೃಪ್ತಿ ಲೇಔಟ್‌ನ ಮನೆಯ ತಾಯಿ ಮತ್ತು ಮೂವರು ಮಕ್ಕಳನ್ನು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಚೌಗಲೆಯನ್ನು ಉಡುಪಿ ಪೊಲೀಸರು ಬೆಳಗಾವಿ ಪೊಲೀಸರಿಂದ ವಶಕ್ಕೆ ಪಡೆದು ನಿನ್ನೆ ಉಡುಪಿಗೆ ಕರೆತಂದಿದ್ದು, ಪ್ರಾಥಮಿಕ ವಿಚಾರಣೆ ನಡೆಸಿದ ಬಳಿಕ ಉಡುಪಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಇದೇ ವೇಳೆ ಹೆಚ್ಚುವರಿ ತನಿಖೆಗಾಗಿ ತಮ್ಮ ಕಸ್ಟಡಿಗೆ ಒಪ್ಪಿಸಬೇಕೆಂದು ಪೊಲೀಸರು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಶ್ಯಾಂ ಪ್ರಕಾಶ್ ಅವರು ನ.28ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದರು.
ನ್ಯಾಯಾಲಯಕ್ಕೆ ಹಾಜರು ಪಡಿಸುವ ವೇಳೆ ಕೋರ್ಟಿನ ಆವರಣದಲ್ಲಿ ಭಾರೀ ಸಂಖ್ಯೆಯ ಜನರು ಸೇರಿದ್ದರಿಂದ ಉಡುಪಿ ನ್ಯಾಯಾಲಯ ಸೇರಿ ಸೂಕ್ಷ್ಮ ಸ್ಥಳಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.


























