ಪುತ್ತೂರು : ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯದ ರಾಜಧಾನಿಯಲ್ಲಿ ಕಂಬಳ ನಡೆಯಲಿದೆ. ಕರಾವಳಿಯ ಜನಪದ ಕ್ರೀಡೆ ವಿಶ್ವಕ್ಕೆ ಪರಿಚಯವಾಗಲಿದೆ. ಕಂಬಳದ ಬಳಿಕ ತುಳುವರಿಗೊಂದು ಭವನ ಬೆಂಗಳೂರಿನಲ್ಲಿ ನಿರ್ಮಾಣವಾಗಬೇಕು ಇದಕ್ಕಾಗಿ ಎರಡು ಎಕ್ರೆ ಜಾಗವನ್ನೂ ಬೆಂಗಳೂರಿನಲ್ಲಿ ನೀಡಬೇಕು. ತುಳುನಾಡಿನ ಜನತೆಯ ಶಕ್ತಿಪ್ರದರ್ಶನದ ಜೊತೆ ನಮ್ಮ ಕಲೆ ಸಂಸ್ಕೃತಿ ವಿಶ್ವಕ್ಕೆ ಪರಿಚಯವಾಗಲಿದೆ ಇದುವೇ ಕಂಬಳದ ಮುಖ್ಯ ಉದ್ದೆಶವಾಗಿದೆ ಎಂದು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷರೂ, ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಹೇಳಿದರು.

ಪುತ್ತೂರಿನಲ್ಲಿ ನಡೆದ ಬೆಂಗಳೂರು ಕಂಬಳ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಕಂಬಳದ ಬಗ್ಗೆ ಮಾಹಿತಿ ನೀಡಿದ್ದು ಹೀಗೆ
ಅಧಿವೇಶನದಲ್ಲಿ ತುಳುವಿನಲ್ಲಿ ಮಾತನಾಡಿದಾಗಲೇ ಹುಟ್ಟಿಕೊಂಡಿತ್ತು. ಅಧಿವೇಶನದಲ್ಲಿ ತುಳುವಿನಲ್ಲಿ ಮಾತನಾಡಿದಾಗಲೇ ಬೆಂಗಳೂರಿನಲ್ಲಿರುವ ತುಳು ಸಂಘಟನೆಗಳು ಸಂತೋಷಗೊಂಡಿದ್ದರು. ಆ ಬಳಿಕ ಸಂಘಟನೆಯ ಪ್ರಮುಖರು ಬಂದು ನನ್ನನ್ನು ಅಭಿನಂದಿಸಿ ತುಳುವಿನಲ್ಲಿ ಮಾತನಾಡಿದಕ್ಕೆ ಶಹಬ್ಬಾಸ್ ಎಂದು ಹೇಳಿ ಬೆಂಗಳೂರಿನಲ್ಲಿ ಕಂಬಳವನ್ನು ಆಯೋಜನೆ ಮಾಡಬೇಕು ಎಂಬ ಆಗ್ರಹವನ್ನು ನನ್ನ ಮುಂದಿಟ್ಟಿದ್ದರು. ಆ ಬಳಿಕ ನಾವು ಚರ್ಚೆ ಮಾಡುವಾಗಲೇ ಮಾಧ್ಯಮದಲ್ಲಿ ಬೆಂಗಳೂರು ಕಂಬಳದ ಬಗ್ಗೆ ವರದಿ ಪ್ರಕಟವಾಗಿತ್ತು.

ರಾಣಿ ಆರಂಭದಲ್ಲಿ ಒಪ್ಪಲಿಲ್ಲ
ಕಂಬಳ ನಡೆಸಬೇಕಾದರೆ ಅರಮನೆ ಮೈದಾನವೇ ಬೇಕಾಗಿತ್ತು. ಈ ಬಗ್ಗೆ ನಮ್ಮ ಒಂದು ತಂಡ ರಾಣಿಯ ಬಳಿ ಮಾತನಾಡಲು ತೆರಳಿದಾಗ ಅವರು ಒಪ್ಪಲಿಲ್ಲ. ನಮ್ಮ ರಾಜಮನೆತನದ ಪುರೋಹಿತರು ಇದ್ದಾರೆ ಅವರು ಹೇಳಿದರೆ ಮಾತ್ರ ಪರಿಶೀಲಿಸುವ ಎಂದು ಹೇಳಿದರು. ರಾಜಪುರೋಹಿತರು ಪ್ರಶ್ನೆ ಕೇಳಬೇಕು, ಮೈದಾನದಲ್ಲಿ ಯಾವುದೇ ಕಾರ್ಯಕ್ರಮ ಮಾಡುವುದದರೆ ಪ್ರಶ್ನೆ ಕೇಳಬೇಕಾಗುತ್ತದೆ. ಪುರೋಹಿತರ ಪ್ರಕಾರ ನಡೆಯಬೇಕಿದೆ ಎಂದು ರಾಣಿ ಹೇಳಿದ್ದರು. ಆ ಬಳಿಕ ನಮ್ಮನ್ನು ಪುರೋಹಿತರೇ ಕರೆದು ನೀವು ಮೈದಾನದಲ್ಲಿ ಕಂಬಳ ಮಾಡಬೇಕು, ಕಂಬಳ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಪ್ರಶ್ನೆಯಲ್ಲಿ ಕಂಡು ಬಂದಿದೆ ಎಂದು ಹೇಳಿದರು. ಆಗ ನಮಗೆ ಇನ್ನಷ್ಟು ಧೈರ್ಯ ಬಂತು.
90 ಲಕ್ಷ ಬಾಡಿಗೆ ಹೇಳಿದವರು ಉಚಿತವಾಗಿ ಕೊಟ್ಟರು
ಅರಮನೆ ಮೈದಾನದ ಒಂದು ಭಾಗ ರಾಜಮನೆತನದ ಬೇರೊಬ್ಬರು ವ್ಯಕ್ತಿಗೆ ಸೇರಿದ್ದು. ನಾವು ಅಲ್ಲಿ ಶಾಮಿಯಾನ ಹಾಕಿದಾಗ ಜಾಗದ ಮಾಲಕರು ಬಂದು 90 ಲಕ್ಷ ಬಾಡಿಗೆ ಕೊಟ್ರೆ ಮಾತ್ರ ಅಲ್ಲಿ ಅವಕಾಶ ಕೊಡುವುದಾಗಿ ಹೇಳಿದರು. ಆ ಬಳಿಕ ಆ ವ್ಯಕ್ತಿಯಲ್ಲಿ ಕಂಬಳದ ಬಗ್ಗೆ ಮಾಹಿತಿ ನೀಡಲಾಯಿತು. ಅವರಿಗೆ ಮನವರಿಕೆ ಮಾಡಿದ ಬಳಿಕ ಅವರು ಬಾಡಿಗೆಯೇ ಬೇಡ ಉಚಿತವಾಗಿ ಮಾಡಿ ಎಂದು ಹೇಳಿದ್ದಾರೆ ಆದರೂ ನಾವು ಅವರಿಗೆ ಗೌರವಧನವನ್ನು ನೀಡುತ್ತೇವೆ ಎಂದು ಹೇಳಿದ್ದೇವೆ. ಹೀಗೆ ಮೈದಾನದಲ್ಲಿ ಇದ್ದ ಅಡೆತಡೆಗಳು ಎಲ್ಲವೂ ದೇವರ ದಯೆಯಿಂದ ನಿವಾರಣೆಯಾಯಿತು.
ಮಂಗಳೂರಿನಿಂದ ಬೆಂಗಳೂರು ತನಕ ಮೆರವಣಿಗೆ
ಕಂಬಳದ ಕೋಣಗಳನ್ನು ಲಾರಿಯಲ್ಲಿ ಹಾಗೇ ಕೊಂಡು ಹೋಗುವುದಿಲ್ಲ. ಬ್ಯಾಂಡ್ ವಾಧ್ಯಗಳ ಮೂಲಕ ತೆರಳುತ್ತೇವೆ. ಅಲ್ಲಲ್ಲಿ ಕಂಬಳದ ಕೋಣದ ಮಾಲಕರಿಗೆ ಸರ್ವ ವ್ಯವಸ್ಥೆಗಳನ್ನು ಮಾಡುತ್ತೇವೆ. ಕಂಬಳದ ಕೋಣದ ಮಾಲಕರಿಗೆ ಸಕಲ ಗೌರವಾಧರಗಳನ್ನು ಕೊಡಲಿದ್ದೇವೆ. ಅವರಿಗೆ ಎಲ್ಲೂ ಒಂದುಷ್ಟು ವ್ಯತ್ಯಾಸವಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಕೋಣಗಳಿಗೂ ತೊಂದರೆಯಾಗದಂತೆ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತದೆ. ತಾಲೂಕು ಕೇಂದ್ರ ಬದಲಾದಂತೆ ನಾವು ಅಲ್ಲಲ್ಲಿ ಬ್ಯಾಂಡ್ , ವಾಧ್ಯಗಳ ಘೋಷಗಳೊಂದಿಗೆ ಸಣ್ಣದೊಂದು ಕಾರ್ಯಕ್ರಮವನ್ನು ಮಾಡಲಿದ್ದೇವೆ. ಮೈಕ್ ಕಟ್ಟಿದ ವಾಹನವೊಂದು ಜೊತೆಗೆ ಇದ್ದು ಪ್ರಚಾರ ಕಾರ್ಯವನ್ನು ಮಾಡಲಿದೆ. ಲಾರಿಯ ಹಿಂದೆ, ಮುಂದೆ ಬೆಂಗಾವಲು ವಾಹನಗಳು ಇರುತ್ತದೆ.
ಹಾಸನದಿಂದ ನೆಲಮಂಗಲಕ್ಕೆ ಭವ್ಯ ಮೆರವಣಿಗೆ
ಹಾಸನದಿಂದ ನೆಲಮಂಗಲದ ತನಕ ಭವ್ಯ ಮೆರವಣಿಗೆಯಲ್ಲಿ ಕೋಣಗಳನ್ನು ಕರೆದೊಯ್ಯಲಾಗುತ್ತದೆ. ಬೆಂಗಳೂರಿನಿಂದ 75 ರಿಂದ 100 ವಾಹನಗಳು ಹಾಸನಕ್ಕೆ ಬರಲಿದೆ. ಹಾಸನದಿಂದ ನೆಲಮಂಗಲ ತನಕ ಮೆರವಣಿಗೆಯಲ್ಲಿ ಸಾಗುವುದು. ನ.24 ರಂದು ಅರಮನೆ ಮೈದಾನಕ್ಕೆ ಪ್ರವೇಶ ಅಲ್ಲಿ ಭವ್ಯ ಸ್ವಾಗತ ನೀಡಲಾಗುತ್ತದೆ. ಆ ದಿನ ವಿರಾಮದ ದಿನವಾಗಿದ್ದು, ಅದೇ ದಿನ ಅರಮನೆ ಮೈದಾನದಲ್ಲಿ ತುಳು ಕಾರ್ಯಕ್ರಮಗಳು ನಡೆಯಲಿದೆ. ನ. 25 ರಂದು ಬೆಳಿಗ್ಗೆ ಕಂಬಳ ಆರಂಭವಾಗಲಿದೆ.
ಗಣ್ಯರ ಭೇಟಿ
ನ.25ರಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕಂಬಳಕ್ಕೆ ಆಗಮಿಸಲಿದ್ದಾರೆ. ರಾಜಮನೆನತದ ರಾಣಿ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿದಂತೆ ಸಚಿವರುಗಳು ಕಂಬಳದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಾಲಿವುಡ್ ನಟಿ ಅನುಷ್ಕಾ ಶೆಟ್ಟಿ, ದೀಪಿಕಾ ಪಡುಕೋಣೆ, ಕ್ರಿಕೆಟಿಗ ಕೆ ಎಲ್ ರಾಹುಲ್, ಐಶ್ವರ್ಯಾ ರೈ, ತಮಿಳು ಚಿತ್ರ ನಟ ರಜನಿಕಾಂತ್ ಹಾಗೂ ಕನ್ನಡದ ಪ್ರಖ್ಯಾತ ನಟ ನಟಿಯರು ಹಾಗೂ 224 ಶಾಸಕರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

























