ಕರೋನಾ ಎರಡನೇ ಅಲೆಯ ಹೊಡೆತಕ್ಕೆ ಹೇರಲ್ಪಟ್ಟ ಲಾಕ್ ಡೌನ್ ನಿಂದ ವ್ಯಾಪಾರ, ವಹಿವಾಟು ದಿನನಿತ್ಯದ ವ್ಯವಹಾರಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಜನಜೀವನವು ಕೂಡ ದುಸ್ತರವಾಗಿರುವ ಘಟನೆಗಳು ನಮ್ಮ ಕಣ್ಣ ಮುಂದಿವೆ.ಇವುಗಳ ಪೈಕಿ ಬಾಡಿಗೆ ಮನೆಗಳಲ್ಲಿ ವಾಸವಾಗಿರುವ ಮಂದಿ ಉದ್ಯೋಗ, ವ್ಯಾಪಾರಗಳಿಲ್ಲದೆ ಬಾಡಿಗೆ ಪಾವತಿಸಲು ಸಂಕಷ್ಟ ಪಡುವ,ಬಾಡಿಗೆ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ನಡೆಸುವ ವ್ಯಾಪಾರಿಗಳು ಬಾಡಿಗೆ ನೀಡಲು ವ್ಯವಹಾರಗಳಿಲ್ಲದಿರುವುದು,ಮನೆ ಕಟ್ಟಲು ಅಥವಾ ತಮ್ಮ ಮಕ್ಕಳ ಮದುವೆ ನಡೆಸಲು ಬ್ಯಾಂಕ್ ನಿಂದ ಪಡೆದ ಸಾಲದ ಕಂತು ಕಟ್ಟಲು ಒತ್ತಡ ಬರುವ ಜೊತೆಗೆ ಖಾಸಗಿ ಬಜಾಜ್ ಫೈನಾನ್ಸ್ ಸೇರಿದಂತೆ ಇನ್ನಿತರ ಲೇವಾದೇವಿ ಸಂಸ್ಥೆಗಳಿಂದ ವಾಹನ ಸೇರಿದಂತೆ ಗೃಹಬಳಕೆಯ ವಸ್ತು ಖರೀದಿಸಲು ಲೋನ್ ಪಡೆದು ತಿಂಗಳ ಇಎಂಐ ಪಾವತಿಸುವ ಒಪ್ಪಂದವಾಗಿರುತ್ತದೆ.
ಈ ಸಂಸ್ಥೆಗಳಿಗೆ ಮಾಸಿಕವಾಗಿ ಪಾವತಿಸಬೇಕಾದ ಕಂತು ಪಾವತಿಸುವಲ್ಲಿ ಒಂದೆರಡು ದಿನ ವಿಳಂಬವಾದರೂ ಪೆನಾಲ್ಟಿ, ದುಪ್ಪಟ್ಟು ಬಡ್ಡಿ ವಿಧಿಸುವ ನಿಯಮಗಳನ್ನು ಸಂಸ್ಥೆಗಳು ಹಾಕಿಕೊಂಡಿವೆ.ಈಗಿನ ಕರೋನಾ ಲಾಕ್ ಡೌನ್ ಸಂದರ್ಭದಲ್ಲಿ ಬ್ಯಾಂಕ್ ಸಾಲ ಪಡೆದು ವ್ಯವಹಾರ ಆರಂಭಿಸಿದವರಿಗೆ ಇತ್ತ ಉದ್ಯೋಗ, ವ್ಯಾಪಾರಗಳಿಲ್ಲದಿದ್ದರೆ ಕಂತು ಮತ್ತು ಬಾಡಿಗೆ ಪಾವತಿಸಲು ಸಾಧ್ಯವೇ?ಈಗಲೂ ಕೆಲವು ಬಜಾಜ್ ಫೈನಾನ್ಸ್ ನಂತಹ ಸಂಸ್ಥೆಯ ಮುಖ್ಯಸ್ಥರುಗಳಿಂದ ಕಂತು ಪಾವತಿದಾರರಿಗೆ ಕಂತು ಪಾವತಿಸುವಂತೆ ಒತ್ತಡ ಹೇರುವ, ಉಡಾಫೆಯಾಗಿ ಮಾತನಾಡುವ, ಬೆದರಿಸುವ ಘಟನೆಗಳು ನಡೆಯುತ್ತಿದ್ದು, ಈ ಬಗ್ಗೆ ಇತ್ತೀಚೆಗೆ ಕರೋನಾ ಸಂಬಂಧಿಸಿದ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಭಾಗಿಯಾಗಿದ್ದ ಶಾಸಕರ ಮುಂದೆ ಮಹಿಳೆಯೋರ್ವರು ಕಣ್ಣೀರಿಟ್ಟು ಅವಲತ್ತುಕೊಂಡಿದ್ದರು.
ಪ್ರಸ್ತುತ ಕರೋನಾದಂತಹ ಮಹಾಮಾರಿ ರೋಗಗಳ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಪರಸ್ಪರ ಮಾನವೀಯತೆ ಮೆರೆಯುವ ಘಟನೆಗಳ ಮಧ್ಯೆ, ದೇಶವಿದೇಶಗಳು ಕರೋನಾ ಭಾಧಿತ ರಾಷ್ಟ್ರಗಳಿಗೆ ನೆರವಿನ ಹಸ್ತ ಚಾಚುವ ಘಟನೆಗಳು ನಮ್ಮ ಕಣ್ಣ ಮುಂದಿವೆ.ಹಸಿದವರಿಗೆ ಅನ್ನ ನೀಡುವ, ರೋಗಿಗಳಿಗೆ ರಕ್ತದಾನ,ಪ್ಲಾಸ್ಮಾ ದಾನ ಮಾಡುವಂತಹ ಮಾನವೀಯ ಮುಖಗಳ ಮಧ್ಯೆ ಬಾಡಿಗೆ ಮನೆಯ ಮಾಲೀಕರು, ಲೇವಾದೇವಿ ಸಂಸ್ಥೆಗಳು ಸೇರಿದಂತೆ ಸ್ವಸಹಾಯ ಸಂಘಗಳು ಸಾಲದ ಬಡ್ಡಿ ಮನ್ನಾ ಸೇರಿದಂತೆ ಕಂತುಗಳ ಪಾವತಿಗೂ ಕೆಲ ತಿಂಗಳ ಕಾಲ ವಿನಾಯಿತಿ ನೀಡಬೇಕಾದ ಅವಶ್ಯಕತೆಗಳಿವೆ.ಜತೆಗೆ ಸರಕಾರವು ಕೂಡ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ನೊಂದವರಿಗೆ ನ್ಯಾಯ ಒದಗಿಸಿ ಒತ್ತಡ, ಬೆದರಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.
✍🏻. ಆದರ್ಶ್ ಶೆಟ್ಟಿ ಉಪ್ಪಿನಂಗಡಿ