ಪುತ್ತೂರು: ಪುತ್ತೂರಿನ ಬೈಪಾಸು ರಸ್ತೆ ತೆಂಕಿಲ ಬಳಿ ಮೇ 17 ರಂದು ಬೆಳಿಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಲ್ಲಿನ ಪ್ರಸಿದ್ದ ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣಗಳ ಮಾರಾಟ ಮಳಿಗೆ ಕೊಡಿಬೈಲ್ ಎಜೆನ್ಸಿ ಹಾಗೂ ಕೊಡಿಬೈಲ್ ಇಂಪೋರ್ಟ್ ಅಂಡ್ ಎಕ್ಸ್ ಪೋರ್ಟ್ ಪ್ರೈ ಲಿ. ಮಾಲಕ ಸತ್ಯನಾರಯಣ ಭಟ್ ಮೃತಪಟ್ಟಿದ್ದಾರೆ.
ತೆಂಕಿಲದ ವಿವೇಕಾನಂದ ಕ್ಯಾಂಪಸ್ ಬಳಿ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಸ್ಕೂಟರ್ ಮಧ್ಯೆ ಈ ಅಪಘಾತ ಸಂಭವಿಸಿತ್ತು. ಮೃತಪಟ್ಟ ಸತ್ಯನಾರಾಯಣ ಭಟ್ ಅವರು ಸ್ಕೂಟರ್ ಚಲಾಯಿಸುತಿದ್ದರು.
ಇಂದು ಬೆಳಿಗ್ಗೆ ಪುತ್ತೂರಿನ ದರ್ಭೆಯ ಅಶ್ವಿನಿ ಸರ್ಕಲ್ ಬಳಿಯ ತಮ್ಮ ಮಳಿಗೆಗೆ ಬಂದಿದ್ದ ಅವರು ಅಲ್ಲಿ ತಮ್ಮ ಕಾರ್ ಪಾರ್ಕ್ ಮಾಡಿ ಸ್ಕೂಟರ್ ನಲ್ಲಿ ಬೈಪಾಸ್ ನಲ್ಲಿ ತೆರಳುತಿದ್ದ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಅಪಘಾತ ನಡೆದ ಸಂದರ್ಭ ಅಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು ಹೀಗಾಗಿ ನಿಯಂತ್ರಣ ಸಂಭವಿಸಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೃತ ದೇಹವನ್ನು ಪುತ್ತೂರು ಆದರ್ಶ ಆಸ್ಪತ್ರೆಯ ಆಂಬುಲೆನ್ಸ್ ದಯಾನಂದ ಅವರ ಸಹಕಾರದೊಂದಿಗೆ ಪುತ್ತೂರು ಸರಕಾರಿ ಅಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎಸ್.ಐ ರಾಮನಾಯ್ಕ್ ಮತ್ತು ಸಿಬ್ಬಂದಿಗಳು ತೆರಳಿ ಮಾಹಿತಿ ಪರಿಶೀಲನೆ ನಡೆಸಿದ್ದಾರೆ.