ಪುತ್ತೂರು: ಜಿಡೆಕಲ್ಲುವಿನ ರಾಗಿದಕುಮೇರು ಎಂಬಲ್ಲಿ ಖಾಸಗಿ ಕಾಮಗಾರಿಗೆಂದು ಹಿಟಾಚಿಯನ್ನು ಹೇರಿಕೊಂಡು ಬಂದಿದ್ದ ಲಾರಿಯೊಂದು ಹಿಟಾಚಿ ಸಮೇತ ಪಲ್ಟಿಯಾದ ಘಟನೆ ಮೇ.17ರಂದು ನಡೆದಿದ್ದು, ಲಾರಿ ಚಾಲಕರು ಮತ್ತು ಹಿಟಾಚಿ ಆಪರೇಟರ್ ಅಪಾಯದಿಂದ ಪಾರಾಗಿದ್ದಾರೆ.
ರಸ್ತೆ ಕಿರಿದಾಗಿದ್ದರಿಂದ ಲಾರಿ ಪಲ್ಟಿಯಾಗಿದೆ ಎನ್ನಲಾಗಿದ್ದು, ಅಪಾಯದ ತಿರುವಿನಲ್ಲಿ ಲಾರಿಯ ಹಿಂಬದಿ ಚಕ್ರ ಇಳಿಜಾರು ಮಣ್ಣಿನಲ್ಲಿ ಹೂತು ಹೋದರಿಂದ ಪಲ್ಟಿಯಾಗಿದೆ. ಲಾರಿ ರಸ್ತೆಯಿಂದ ಪಕ್ಕದ ಖಾಸಗಿ ಜಮೀನಿಗೆ ಪಲ್ಟಿಯಾಗಿದ್ದು, ಲಾರಿಯಲ್ಲಿದ್ದ ಚಾಲಕ ಮತ್ತು ಹಿಟಾಚಿ ಆಪರೇಟರ್ ಅಲ್ಪಸ್ವಲ್ಪ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸಂಜೆ ವೇಳೆ ಕ್ರೈನ್ ಮತ್ತು ಜೆಸಿಬಿ ಮೂಲಕ ಲಾರಿಯನ್ನು ಮೆಲಕ್ಕೆತ್ತು ಕೆಲಸ ನಡೆಯಿತು.
ರಸ್ತೆ ಅತಿಕ್ರಮಣದಿಂದ ಕಿರಿದಾದ ರಸ್ತೆ:ರಸ್ತೆ ಅತಿಕ್ರಮಣದಿಂದಾಗಿ ರಾಗಿದಕುಮೇರು ಬಳಿ ರಸ್ತೆ ಕಿರಿದಾಗಿದೆ. ಈ ಕುರಿತು ಕಲಿಯುಗ ಸೇವಾ ಸಮಿತಿಯಿಂದ ರಸ್ತೆ ಅಗಲೀಕರಣ ಮತ್ತು ಅತಿಕ್ರಮಣವನ್ನು ತೆರವು ಮಾಡಲು ಸಹಾಯಕ ಆಯುಕ್ತರಿಗೆ ದೂರು ಸಲ್ಲಿಸಲಾಗಿತ್ತು. ರಸ್ತೆ ಅಗಲೀಕರಣಕ್ಕೆ ತಹಸೀಲ್ದಾರ್ ಆದೇಶವಾಗಿದ್ದರೂ ಜಮೀನು ಮಾಲಕರು ಸಹಕರಿಸದ ಕಾರಣ ರಸ್ತೆ ಅಗಲೀಕರಣ ಬಾಕಿ ಆಗಿತ್ತು. ಇನ್ನಾದರೂ ರಸ್ತೆ ಅಗಲೀಕರಣ ಮಾಡುವಂತೆ ಕಲಿಯುಗ ಸೇವಾ ಸಮಿತಿ ಆಗ್ರಹಿಸಿದೆ.