ಪುಣಚ: ಕುಡ್ತಮುಗೇರಿನಲ್ಲಿ ಶ್ರೀ ರಾಮ ಕ್ಲಿನಿಕ್ ನಡೆಸುತ್ತಿದ್ದ ಡಾ.ರಾಮಚಂದ್ರ ಶಾಸ್ತ್ರಿ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅಜ್ಜಿನಡ್ಕದಲ್ಲಿ ವೈದ್ಯ ವೃತ್ತಿ ಆರಂಭಿಸಿದ್ದ ಡಾ. ಶಾಸ್ತ್ರಿಯವರು ಬಳಿಕ ಮೂವತ್ತು ವರ್ಷಗಳ ಕಾಲ ಸರಕಾರಿ ವೈದ್ಯರಾಗಿ ಅಡ್ಯನಡ್ಕದಲ್ಲಿ ಸೇವೆ ನೀಡುತ್ತಾ ಜನರ ಪಾಲಿಗೆ ಪ್ರತ್ಯಕ್ಷ ದೇವರಂತಿದ್ದರು.
ಬಳಿಕ ಪದೋನ್ನತಿ ಪಡೆದ ಡಾ.ರಾಮಚಂದ್ರ ಶಾಸ್ತ್ರಿಯವರು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಜಿಲ್ಲಾ ಕ್ಷಯರೋಗ ತಜ್ಞರಾಗಿ ನಾಲ್ಕು ವರ್ಷಗಳ ಕಾಲ ಸೇವೆ ನೀಡಿ ನಿವೃತ್ತಿಯಾಗಿದ್ದರು.
ನಿವೃತ್ತಿಯ ಬಳಿಕ ಸುಮಾರು 15ವರ್ಷಗಳಿಂದ ಕುಡ್ತಮುಗೇರಿನಲ್ಲಿ ಶ್ರೀ ರಾಮ ಕ್ಲಿನಿಕ್ ನಡೆಸುತ್ತಾ ಜನಮಾನಸದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದರು.
ಮಂಗಳವಾರ ರಾತ್ರಿ ತೀವ್ರ ಎದೆನೋವಿನ ಕಾರಣಕ್ಕಾಗಿ ಪುತ್ತೂರು ಆಸ್ಪತ್ರೆಗೆ ಡಾ.ಶಾಸ್ತ್ರಿಯವರನ್ನು ಕರೆದೊಯ್ದು ಅಲ್ಲಿನ ವೈದ್ಯರ ಸೂಚನೆಯಂತೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ದಾಖಲಾಗಿದ್ದರೂ ಇಂದು ಸಂಜೆ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ, ಪುತ್ರ ಮತ್ತು ಓರ್ವ ಪುತ್ರಿ ಹಾಗೂ ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ.