ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಹಿನ್ನೆಲೆ ಕೊರೊನಾ ಪರೀಕ್ಷೆ ನಡೆಸುವ ಲ್ಯಾಬ್‌ಗಳ ಮೇಲೆ ಸಾಕಷ್ಟು ಒತ್ತಡ ಬಿದ್ದಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಮನೆಯಲ್ಲೇ ಕೊರೊನಾ ಪರೀಕ್ಷೆ ನಡೆಸಲು ರ್‍ಯಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್‌ಗಳ ಬಳಕೆಗೆ ಅನುಮತಿ ದೊರೆತಿದೆ.
ಈ ಟೆಸ್ಟ್ ಕಿಟ್‌ನಿಂದ ಶೀಘ್ರವೇ ಫಲಿತಾಂಶ ಸಿಗಲಿದ್ದು, ಕೊರೊನಾ ಸೋಂಕಿತರಿಗೆ ಇದು ನೆರವಾಗಲಿದೆ ಎನ್ನಲಾಗಿದೆ. ಈ ಪರೀಕ್ಷೆಯನ್ನು ಯಾರು ಹಾಗೂ ಹೇಗೆ ಮಾಡಬೇಕು ಎನ್ನುವ ಬಗ್ಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮಾರ್ಗಸೂಚಿಯನ್ನು ಜಾರಿ ಮಾಡಿದೆ.
ಸೋಂಕಿನ ರೋಗ ಲಕ್ಷಣಗಳು ಕಾಣಿಸಿಕೊಂಡ ವ್ಯಕ್ತಿಗಳು ಹಾಗೂ ಲ್ಯಾಬ್ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದಿರುವ ವ್ಯಕ್ತಿಗಳ ನಿಕಟ ಸಂಪರ್ಕಕ್ಕೆ ಒಳಗಾಗಿರುವವರು ಈ ಕೋವಿಸೆಲ್ಫ್ ಕಿಟ್ ಅನ್ನು ತೆಗೆದುಕೊಳ್ಳಬೇಕು ಎಂದು ಐಸಿಎಂಆರ್ ತಿಳಿಸಿದೆ.
ಕೋವಿಸೆಲ್ಫ್ಟಿಎಂ (ಪ್ಯಾಥೋಕ್ಯಾಚ್) ಕೋವಿಡ್-19 ಒಟಿಸಿ ಆಯಂಟಿಜನ್ ಎಲ್ಎಫ್ ಡಿವೈಸ್ ಎನ್ನುವ ಉಪಕರಣವನ್ನು ಪುಣೆಯ ಮೈಲ್ಯಾಬ್ ಡಿಸ್ಕವರಿ ಸಲ್‌ಐಷನ್ಸ್ ಲಿಮಿಟೆಡ್ ಕಂಪೆನಿ ರೂಪಿಸಿದೆ. ಇದನ್ನು ಹೋಂಟೆಸ್ಟ್‌ಗಾಗಿ ಅನುಮೋದಿಸಿದ್ದು, ಈ ಟೆಸ್ಟ್ ಕಿಟ್‌ನ ಬೆಲೆ 250 ರೂ. ಎನ್ನಲಾಗಿದೆ.
ಈ ಟೆಸ್ಟ್ ಕಿಟ್ ಅನ್ನು ಬಳಸಿ ಮನೆಯಲ್ಲೇ ಪರೀಕ್ಷೆ ಮಾಡಲು ಬಯಸುವವರು, ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪ್ ಸ್ಟೋರ್‌ಗಳಲ್ಲಿ ಲಭ್ಯವಿರುವ ಆಪ್‌ಗಳನ್ನು ಡೌನ್‌ಲೋಡ್ ಮಾಡಿ, ಅದರಲ್ಲಿ ನೀಡಿರುವ ವಿಧಾನವನ್ನು ಅನುಸರಿಬೇಕು. ಪಾಸಿಟಿವ್ ಅಥವಾ ನೆಗೆಟಿವ್ ವರದಿ ಬಂದ ಬಳಿಕ ಟೆಸ್ಟ್ ಸ್ಟ್ರಿಪ್ನ ಫೋಟೋವನ್ನು ಅದೇ ಮೊಬೈಲ್ ಫೋನ್‌ನಲ್ಲಿ ತೆಗೆಯಬೇಕು. ಇದರಿಂದ ಮುಂದಿನ ಕ್ರಮಕ್ಕಾಗಿ ವ್ಯಕ್ತಿಯ ಡೇಟಾ ಐಸಿಎಂಆರ್ನ ಕೇಂದ್ರೀಯ ಕೋವಿಡ್-19 ಟೆಸ್ಟಿಂಗ್ ಪೋರ್ಟಲ್ನಲ್ಲಿ ಸಂಗ್ರಹವಾಗುತ್ತದೆ ಎನ್ನಲಾಗಿದೆ.
ಇದರಲ್ಲಿ ಪಾಸಿಟಿವ್ ವರದಿ ಬಂದರೆ ಅವರನ್ನು ಆರ್ಟಿಪಿಸಿಆರ್ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದವರಂತೆ ಪರಿಗಣಿಸಬೇಕು. ಪುನಃ ಪರೀಕ್ಷೆ ಮಾಡಬೇಕೆಂದಿಲ್ಲ. ಆದರೆ ಒಂದುವೇಳೆ ಗುಣಲಕ್ಷಣಗಳಿದ್ದು, ನೆಗೆಟಿವ್ ಬಂದಲ್ಲಿ ಅವರನ್ನು ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಬೇಕು. ಕೆಲವು ಬಾರಿ ವೈರಲ್ ಲೋಡ್ ಕಡಿಮೆ ಇದ್ದಲ್ಲಿ ಆರ್ಎಟಿಯಲ್ಲಿ ಪತ್ತೆಯಾಗುವುದಿಲ್ಲ ಎಂದು ಐಸಿಎಂಆರ್ ಹೇಳಿದೆ.