ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡದಲ್ಲಿ ಯಾವುದೇ ಹೊಸ ಮಾರ್ಗಸೂಚಿ ಬಿಡುಗಡೆಗೊಂಡಿಲ್ಲ, ಸದ್ಯಕ್ಕೆ ಈಗಿನ ಮಾರ್ಗಸೂಚಿಯೇ ಜಾರಿಯಲ್ಲಿರುತ್ತದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ .ಕೆ.ವಿ ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ.
“ದ.ಕ.ಜಿಲ್ಲೆಯಾದ್ಯಂತ ಕೆಲವು ನಿರ್ಬಂಧಗಳೊಂದಿಗೆ ಹೊಸ ಮಾರ್ಗಸೂಚಿ ಜಾರಿಯಾಗುತ್ತದೆ, ವಾರದಲ್ಲಿ ಎರಡು ದಿನ ಮಾತ್ರ ಸಾಮಾಗ್ರಿ ಖರೀದಿಗೆ ಅವಕಾಶ ನೀಡಲಾಗುತ್ತದೆ, ಮದುವೆ ಸಮಾರಂಭಗಳಿಗೆ ಅವಕಾಶ ಇರುವುದಿಲ್ಲ” ಎಂದು ಸಾಮಾಜಿಕ ಜಾಲತಾಣ ಹಾಗೂ ವೆಬ್ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವರದಿಯ ವಿಚಾರವಾಗಿ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಮೇ 24 ರವರೆಗೂ ಈಗಿರುವ ಆದೇಶನೇ ಜಾರಿಯಲ್ಲಿದ್ದು, ಇನ್ನಷ್ಟು ಕಠಿಣ ಕ್ರಮಕ್ಕೆ ಪೊಲೀಸರಿಗೆ ಸೂಚಿಸಲಾಗುವುದು, ಮೇ 23 ರ ರಾಜ್ಯ ಸರ್ಕಾರದ ಮಾರ್ಗಸೂಚಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಈ ರೀತಿಯ ಸುಳ್ಳು ಸುದ್ದಿಗಳನ್ನು ಬಿತ್ತರಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ. ಈಗಾಗಲೇ ಸುಳ್ಳು ಸುದ್ದಿ ಬಿತ್ತರಿಸಿರುವ ಸಂಸ್ಥೆಯ ವಿರುದ್ಧ ಪೊಲೀಸರಿಗೆ ದೂರು ನೀಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.