ಮುಕ್ಕೂರು : ಪೆರುವಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಕ್ಕೂರು ವಾರ್ಡ್‌ನಲ್ಲಿ ಕೋವಿಡ್ ನಿಯಂತ್ರಣ ಕಾರ್ಯಪಡೆಯ ಪ್ರಥಮ ಸಭೆ ಹಾಗೂ ಆಶಾ ಕಾರ್ಯಕರ್ತೆರ್ಯರಿಗೆ ಪಲ್ಸ್ ಆಕ್ಸಿ ಮೀಟರ್, ಪುಡ್ ಕಿಟ್ ವಿತರಣೆಯು ಮುಕ್ಕೂರು ಶಾಲಾ ವಠಾರದಲ್ಲಿ ಮೇ 21 ರಂದು ನಡೆಯಿತು.
ಸಭಾ ಅಧ್ಯಕ್ಷತೆಯನ್ನು ವಹಿಸಿದ ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಕೊರೊನಾ ಪ್ರಕರಣಗಳು ನಗರದಿಂದ ಗ್ರಾಮಾಂತರಕ್ಕೆ ಹಬ್ಬಿದ್ದು ಸಮುದಾಯಕ್ಕೆ ಹರಡುತ್ತಿದೆ. ಇದರ ನಿಯಂತ್ರಣದ ಬಗ್ಗೆ ನಾವೆಲ್ಲರೂ ಸ್ವಯಂ-ಜಾಗೃತಿ ವಹಿಸಬೇಕು. ಭವಿಷ್ಯದ ಮುನ್ನೆಚ್ಚೆರಿಕೆ ದೃಷ್ಟಿಯಿಂದ ಮುಕ್ಕೂರು ಸರಕಾರಿ ಪ್ರಾಥಮಿಕ ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾಮಾಜಿಕ ಮುಂದಾಳು ಸಂತೋಷ್ ಕುಮಾರ್ ರೈ ಕಾಪು ಮಾತನಾಡಿ, ಕೊರೊನಾ ಕುರಿತು ಅನಗತ್ಯ ಆತಂಕ ಪಡದೆ ಮುನ್ನೆಚ್ಚೆರಿಕೆ ವಹಿಸಬೇಕು. ರೋಗ ನಿಯಂತ್ರಣದ ಬಗ್ಗೆ ಪ್ರತಿಯೊಬ್ಬರು ನಿಯಮಗಳನ್ನು ಪಾಲಿಸಬೇಕು. ರೋಗ ನಿರೋಧಕ ಶಕ್ತಿ ವೃದ್ಧಿಗೆ ಪೂರಕವಾದ ಆಹಾರ ವಸ್ತುಗಳನ್ನು ಸೇವಿಸಬೇಕು. ಮುಕ್ಕೂರು ವಾರ್ಡ್ ನಲ್ಲಿ ಲಸಿಕೆ ಪಡೆದುಕೊಳ್ಳಲು ಪೂರಕವಾಗಿ ಕಾರ್ಯಪಡೆ ಮೂಲಕ ಪ್ರತಿಯೊಬ್ಬರ ಆನ್ಲೈನ್ ನೋಂದಣಿ ಮಾಡಿಸುವುದು, ಅಗತ್ಯದ ಸಂದರ್ಭದಲ್ಲಿ ಆಹಾರ ಕಿಟ್ ಒದಗಿಸುವ ಮೂಲಕ ನೆರವಾಗೋಣ ಎಂದರು.
ಹರ್ಷ ಸಂಸ್ಥೆಯ ಸೀನಿಯರ್ ಸೇಲ್ಸ್ ಎಕ್ಸಿಕ್ಯೂಟಿವ್ ರಾಧಾಕೃಷ್ಣ ರೈ ಕನ್ನೆಜಾಲು, ಜ್ಯೋತಿ ಯುವಕ ಮಂಡಲದ ಕಾರ್ಯದರ್ಶಿ ನವೀನ್ ಶೆಟ್ಟಿ ಬರಮೇಲು, ಮುಕ್ಕೂರು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಕುಂಞಣ್ಣ ನಾಯ್ಕ ಅಡ್ಯತಕಂಡ ಅವರು ವಾರ್ಡ್ ನಲ್ಲಿ ಕೈಗೊಳ್ಳಬಹುದಾದ ಕಾರ್ಯಚಟುವಟಿಕೆಗಳ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಕಾರ್ಯಪಡೆ ಸದಸ್ಯರಾದ ಕೆ.ಎಚ್.ಮಹಮ್ಮದ್, ಐತ್ತಪ್ಪ ಕಾನಾವು, ಮಹೇಶ್, ಜಯಂತ ಕುಂಡಡ್ಕ, ಆಶಾ ಕಾರ್ಯಕರ್ತೆ ದೇವಕಿ, ಅಂಗನವಾಡಿ ಕಾರ್ಯಕರ್ತೆ ರೂಪಾ ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಆಶಾ ಕಾರ್ಯಕರ್ತೆ ರಾಗಿಣಿ ಮಾತನಾಡಿ, ಮುಕ್ಕೂರು ವಾರ್ಡ್ ನಲ್ಲಿ ಈ ತನಕ 10 ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. ಓರ್ವರು ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ ಐದು ಮಂದಿ ಗುಣಮುಖರಾಗಿದ್ದಾರೆ. ಉಳಿದವರು ಚೇತರಿಸಿಕೊಳ್ಳುತ್ತಿದ್ದಾರೆ. ಕೊರೊನಾ ಸೋಂಕಿತರು ಹಾಗೂ ಆ ಮನೆಯವರು ಮನೆಯೊಳಗೆ ಇದ್ದು ಸಹಕಾರ ನೀಡಬೇಕು ಎಂದರು.
ಆಹಾರ್ ಕಿಟ್, ಪಲ್ಸ್ ಆಕ್ಸಿ ಮೀಟರ್ ವಿತರಣೆ : ಇದೇ ಸಂದರ್ಭದಲ್ಲಿ ತಾಲೂಕಿನಲ್ಲಿ ಪ್ರಥಮ ಬಾರಿಗೆ ವಾರ್ಡ್ ವೊಂದರ ಕಾರ್ಯಪಡೆ ಮೂಲಕ ಮುಕ್ಕೂರಿನಲ್ಲಿ ಕಾರ್ಯನಿರ್ವಹಿಸುವ ಇಬ್ಬರು ಆಶಾ ಕಾರ್ಯಕರ್ತೆಯರಿಗೆ ಪಲ್ಸ್ ಆಕ್ಸಿ ಮೀಟರ್ ಉಪಕರಣ ವಿತರಿಸಲಾಯಿತು. ಜತೆಗೆ ಆಹಾರ್ ಕಿಟ್ ನೀಡಲಾಯಿತು. ವೇದಿಕೆಯಲ್ಲಿ ಗ್ರಾ.ಪಂ.ಸದಸ್ಯೆ ಗುಲಾಬಿ ಬೊಮ್ಮೆಮಾರು ಉಪಸ್ಥಿತರಿದ್ದರು. ಬೃಂದಾ ಮುಕ್ಕೂರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯ ಪಡೆಯ ನಿರ್ಣಯಗಳು: ವಾರ್ಡ್ ನ ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಲು ಪೂರಕವಾಗಿ ಆ್ಯಪ್ ಮೂಲಕ ಆನ್ಲೈನ್ ನೋಂದಣಿ ಮಾಡಿಸಲು ಕಾರ್ಯಪಡೆ ಅಭಿಯಾನದ ರೂಪದಲ್ಲಿ ನೆರವಾಗುವುದು, ಮುಕ್ಕೂರು ಹಿರಿಯ ಪ್ರಾಥಮಿಕ ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲು ಗ್ರಾ.ಪಂ.ಕಾರ್ಯಪಡೆಗೆ ಮನವಿ ಮಾಡುವುದು, ಐದಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣ ಕಂಡು ಬಂದ ಮನೆಗಳನ್ನು ಸೀಲ್ಡೌನ್ ಮಾಡುವುದು, ಆ ಮನೆಗಳಿಗೆ ಕಾರ್ಯಪಡೆ ಮೂಲಕ ಅಗತ್ಯ ಸಾಮಗ್ರಿ ಒದಗಿಸುವುದು, ಪಾಸಿಟಿವ್ ಕಂಡು ಬಂದ ವ್ಯಕ್ತಿ ಹಾಗೂ ಮನೆಯವರ ಜತೆಗೆ ದೂರವಾಣಿ ಸಂಪರ್ಕ ಹಾಗೂ ಅಗತ್ಯದ ಸಂದರ್ಭದಲ್ಲಿ ಮನೆ ಬೇಟಿ ಮಾಡುವ ಮೂಲಕ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡುವುದು, ತುರ್ತು ಸಂಪರ್ಕ, ಸ್ಪಂದನೆಯ ದೃಷ್ಟಿಯಿಂದ ಪ್ರತಿ ಮನೆಯ ದೂರವಾಣಿ ಸಂಖ್ಯೆ ಸಂಗ್ರಹಿಸಿ ಸಂಪರ್ಕ ಬ್ಯಾಂಕ್ ಎಂಬ ವಿನೂತನ ಪರಿಕಲ್ಪನೆ ಅನುಷ್ಠಾನಿಸಲು ತೀರ್ಮಾನಿಸಲಾಯಿತು.