ಬಂಟ್ವಾಳ : ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದ 6 ತಿಂಗಳ ಗರ್ಭಿಣಿ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ನಡೆದಿದೆ.
ಗರ್ಭಸ್ಥ ಶಿಶುವಿನ ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರು ಲೇಡಿಗೋಶನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ತೆಂಕಕಜೆಕಾರು ನಿವಾಸಿ ವಸಂತ ಅವರ ಪತ್ನಿ ಸುಜಾತ ಅವರು ಏಕಾಏಕಿ ಆರೋಗ್ಯ ಏರುಪೇರಾಗಿ ಮೃತಪಟ್ಟಿದ್ದಾರೆ.
ಶಿಶುವಿಗೆ ಹೃದಯ ಸಂಬಂಧಿ ತೊಂದರೆ ಇದೆ ಎನ್ನುವ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು 10 ವರ್ಷಗಳ ಹಿಂದೆ ವಿವಾಹವಾಗಿದ್ದು, ಬಹಳ ಕಾಲ ಮಕ್ಕಳಾಗಿರಲಿಲ್ಲ, ಪ್ರಸ್ತುತ ಚೊಚ್ಚಲ ಗರ್ಭಿಣಿಯಾಗಿದ್ದರು.
ಹಲವು ವರ್ಷಗಳ ಕಾಲ ಸರಪಾಡಿ ಗ್ರಾಮಕರಣೀಕರ ಕಚೇರಿಯಲ್ಲಿ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಸುಜಾತ ಅವರು ಗ್ರಾಮದಲ್ಲಿ ಚಿರಪರಿಚಿತರಾಗಿದ್ದರು.