ಬೆಂಗಳೂರು : ಇನ್ಮುಂದೆ ವಿವಾಹ ನೋಂದಣಿ ಪ್ರಮಾಣಪತ್ರಕ್ಕಾಗಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಅಲೆದಾಡಬೇಕಾಗಿಲ್ಲ ಮನೆಯಲ್ಲಿಯೇ ಕೂತು ವಿವಾಹ ಪ್ರಮಾಣ ಪತ್ರಗಳನ್ನು ಪಡೆಯಬಹುದು.
ವಿವಾಹವಾದ ಪ್ರಮಾಣ ಪತ್ರ ಪಡೆಯಬೇಕಾದ್ರೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಅಲೆದಾಡಬೇಕಾಗಿತ್ತು. ಒಂದಿಷ್ಟು ಪ್ರಕ್ರಿಯೆಗಳು ಕೂಡ ನಡೆಯಬೇಕು. ಆದರೆ ಇನ್ಮುಂದೆ ಫಟಾಫಟ್ ಅಂತಾ ಪತ್ರ ಸಿಗಲಿದೆ. ಇನ್ಮುಂದೆ ‘ಕಾವೇರಿ’ ತಂತ್ರಾಂಶದಲ್ಲಿ ಹಿಂದೂ ವಿವಾಹ ಪ್ರಮಾಣ ಪತ್ರವನ್ನು ಪಡೆಯಬಹುದು.
ಸರ್ಕಾರ ಪರಿಚಯಿಸಿರುವ ಕಾವೇರಿ ತಂತ್ರಾಂಶದ ಮೂಲಕ ವೆಬ್‌ಸೈಟ್‌ನಲ್ಲಿ ದಂಪತಿಗಳು ತಮ್ಮ ಮದುವೆ ಫೋಟೋ, ಆಧಾರ್ ಸಂಖ್ಯೆ, ಮದುವೆ ಆಮಂತ್ರಣ ಪತ್ರಿಕೆಯ ದಾಖಲಾತಿಯನ್ನು ಮನೆಯಲ್ಲಿ ಕೂತೇ ಆನ್‌ಲೈನ್‌ನಲ್ಲಿ ಸಲ್ಲಿಕೆ ಮಾಡಿ ವಿವಾಹ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ.
ಈ ಕುರಿತು ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಇವರೆಗೆ 100 ಮದುವೆ ನಡೆದರೆ ಅದ್ರಲ್ಲಿ 30 ದಂಪತಿಗಳು ಮಾತ್ರ ವಿವಾಹ ಪ್ರಮಾಣ ಪತ್ರ ಪಡೆಯುತ್ತಿದ್ದರು. ಹೀಗಾಗಿ ವ್ಯಾಜ್ಯ ಅಥವಾ ಕಾನೂನಾತ್ಮಕ ಸಮಸ್ಯೆ ಬರುತ್ತಿತ್ತು. ಜನರಿಗೆ ಸರಳೀಕರಣದ ಸೇವೆ ನೀಡುವ ಸಲುವಾಗಿ ಈ ಯೋಜನೆ ಜಾರಿಯಾಗಿದೆ. ವಿವಾಹ ಪ್ರಮಾಣ ಪತ್ರದ ಜೊತೆಗೆ ಸದ್ಯ ಸಬ್‌ರಿಜಿಸ್ಟ್ರಾರ್ ಕಚೇರಿಯ ಅನೇಕ ಸೇವೆಗಳನ್ನು ಆನ್‌ಲೈನ್ ಮೂಲಕ ಜನರಿಗೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
 
	    	


























