ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳು ತೀರಿಕೊಂಡ ನಂತರ, ಬಿಲ್ನ ಬಾಕಿ ಹಣಕ್ಕೆ ಒತ್ತಾಯಿಸಿ ಮೃತದೇಹ ಹಸ್ತಾಂತರಿಸದ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಈ ರೀತಿ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕೆಪಿಎಂಇ ಕಾಯ್ದೆ(ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್ಮೆಂಟ್ ಆ್ಯಕ್ಟ್-2007) ಅಡಿ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.
ಕೋವಿಡ್ ಸೋಂಕಿತರು ಆಸ್ಪತ್ರೆಗಳಲ್ಲಿ ಮೃತಪಟ್ಟರೆ ಬಾಕಿ ಹಣಕ್ಕೆ ಒತ್ತಾಯಿಸುವಂತಿಲ್ಲ. ಹಣ ಪಾವತಿಸುವವರೆಗೂ ಶವ ಹಸ್ತಾಂತರಿಸಲು ನಿರಾಕರಿಸುವಂತಿಲ್ಲ. ಎಲ್ಲಾ ಜಿಲ್ಲಾಧಿಕಾರಿಗಳು ಈ ಸಂಬಂಧ ಕಾರ್ಯಪ್ರವೃತ್ತರಾಗಬೇಕು. ಖಾಸಗಿ ಆಸ್ಪತ್ರೆಗಳು ಈ ರೀತಿ ಮಾಡಿದಲ್ಲಿ ಆಸ್ಪತ್ರೆ ನೋಂದಣಿ ರದ್ದು ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ.
ವಾರಕ್ಕೆ ಒಮ್ಮೆ ಈ ಬಗ್ಗೆ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸಬೇಕೆಂದು ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿ ಜಾವೆದ್ ಅಖ್ತರ್ ಆದೇಶ ಹೊರಡಿಸಿದ್ದಾರೆ.