ಮುಂಬೈ : ಯಾವುದೇ ಕೆಲಸ ಮಾಡಬೇಕಾದರೆ ತಾಳ್ಮೆ ಇರಬೇಕು. ಆವಾಗಲೇ ಆ ಕೆಲಸ ನೂರರಷ್ಟು ಯಶಸ್ವಿಯಾಗುತ್ತದೆ. ಅದರಂತೆ ಬೇಟೆಯನ್ನು ಹುಡುಕಿಕೊಂಡು ಬಂದ ಚಿರತೆಯನ್ನು ಆಫೀಸ್ನಲ್ಲಿ ಬಾಲಕನೊಬ್ಬ ಅತ್ಯಂತ ತಾಳ್ಮೆಯಿಂದ, ಸ್ಮಾರ್ಟ್ ಆಗಿ ಕೂಡಿ ಹಾಕಿದ್ದಾನೆ.
ಈ ಘಟನೆಯು ಮಹಾರಾಷ್ಟ್ರದ ಮಾಲೆಗಾಂವ್ನಲ್ಲಿ ನಡೆದಿದೆ.
ಕಲ್ಯಾಣ ಮಂಟಪದ ಸೆಕ್ಯೂರಿಟಿ ಗಾರ್ಡ್ವೊಬ್ಬರ ಮಗ ಮೋಹಿತ್ ಅಹಿರೆ (12) ಚಾಣಕ್ಷತೆಯಿಂದ ಚಿರತೆಯನ್ನು ಕೂಡಿ ಹಾಕಿದ್ದಾನೆ.
ತಂದೆ ಹೊರ ಹೋದ ಸಮಯದಲ್ಲಿ ಆಫೀಸ್ನ ಬಾಗಿಲಿನ ಬಳಿಯಿದ್ದ ಸೋಫಾದಲ್ಲಿ ಮೊಬೈಲ್ನಲ್ಲಿ ಗೇಮ್ ಆಡಿಕೊಂಡು ಕುಳಿತಿರುತ್ತಾನೆ. ಅದೇ ವೇಳೆ ಅಲ್ಲಿಗೆ ಬೇಟೆ ಹುಡುಕಿಕೊಂಡು ಚಿರತೆ ಬಂದು ಆಫೀಸ್ನೊಳಗೆ ಹೋಗಿದೆ. ಆದರೆ ಬಾಗಿಲು ಬಳಿ ಸೋಫಾದಲ್ಲಿ ಕುಳಿತ್ತಿದ್ದ ಬಾಲಕನನ್ನು ಗಮನಿಸದೇ ಚಿರತೆ ಒಳ ಹೋಗಿದೆ. ಆದರೆ ಈ ವೇಳೆ ಯಾವುದೇ ಕೂಗದೇ, ಗಲಾಟೆ ಮಾಡದೇ ಕುಳಿತಲ್ಲಿಂದ ಸೈಲೆಂಟ್ ಆಗಿ ಎದ್ದ ಬಾಲಕ ತಕ್ಷಣ ಬಾಗಿಲನ್ನು ಮುಚ್ಚಿದ್ದಾನೆ.
ಬಾಗಿಲು ಹಾಕಿದ ತಕ್ಷಣ ಬಾಲಕ ಕಿರುಚಿಕೊಂಡಿದ್ದಾನೆ. ಇದನ್ನು ಕೇಳಿದ ಸ್ಥಳೀಯರೆಲ್ಲ ಓಡೋಡಿ ಬಂದು ಏನಾಯಿತು ಎಂದು ಕೇಳಿದ್ದಾರೆ. ಆಗ ಬಾಲಕ ನಡೆದಿದ್ದನ್ನು ಹೇಳಿದ್ದರಿಂದ ಸ್ಥಳೀಯರು ಮಾಹಿತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ, ಪೊಲೀಸರಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯುವುದರಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಚಿರತೆಯನ್ನು ಕೂಡಿ ಹಾಕಿದ ಬಾಲಕನ ಚಾಣಕ್ಷತೆಯ ದೃಶ್ಯ ಆಫೀಸ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರೆಲ್ಲ ಬಾಲಕನ ಕೆಲಸಕ್ಕೆ ಸೆಲ್ಯೂಟ್ ಎಂದು ಹೇಳುತ್ತಿದ್ದಾರೆ.



























