ವೇಣೂರು : ಜಾನುವಾರುಗಳನ್ನು ಹಿಂಸಾತ್ಮಕ ಕರೆದೊಯ್ಯುತ್ತಿದ್ದ ಘಟನೆ ವೇಣೂರು-ನೈನಾಡು- ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿರುವಾಗ ಬೆಳಕಿಗೆ ಬಂದಿದ್ದು, ವಾಹನದಲ್ಲಿದ್ದವರು ಪರಾರಿಯಾಗಿದ್ದಾರೆ.
ಮಾ.30 ರಂದು ಸಂಜೆ ಸಮಯ, ಬೆಳ್ತಂಗಡಿ ತಾಲೂಕು ಬಜಿರೆ ಗ್ರಾಮದ ಬಾಡಾರು ಎಂಬಲ್ಲಿ ವೇಣೂರು- ನೈನಾಡು ಸಾರ್ವಜನಿಕ ರಸ್ತೆಯಲ್ಲಿ ವೇಣೂರು ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಶೈಲ ಡಿ. ಮುಗೋಡು ರವರು ಹಾಗೂ ಸಿಬ್ಬಂದಿಗಳು ವಾಹನ ತಪಾಸಣೆ ನಡೆಸುತ್ತಿದ್ದಾಗ, ಸದ್ರಿ ಮಾರ್ಗವಾಗಿ ಬಂದ ದೋಸ್ತ್ ಗೂಡ್ಸ್ ವಾಹನವನ್ನು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಿದಾಗ, ಸದ್ರಿ ವಾಹನ ಚಾಲಕನು ವಾಹನವನ್ನು ನಿಲ್ಲಿಸದೆ ವೇಣೂರು ಕಡೆಗೆ ಚಲಾಯಿಸಿದ್ದು, ಕೂಡಲೇ ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನಲ್ಲಿ ಹಿಂಬಾಲಿಸಿಕೊಂಡು ಸುಮಾರು ½ ಕಿ.ಮೀ ದೂರ ಶಾಂತಿರೊಟ್ಟು ಎಂಬಲ್ಲಿಗೆ ತಲುಪಿದಾಗ, ಸದ್ರಿ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಚಾಲಕ ಹಾಗೂ ಇನ್ನೋರ್ವ ವ್ಯಕ್ತಿ ವಾಹನದಿಂದ ಇಳಿದು ಗೇರುಗಿಡಗಳ ನಡುತೋಪಿನಲ್ಲಿ ಓಡಿ ತಪ್ಪಿಸಿಕೊಂಡಿರುತ್ತಾರೆ.
ವಾಹನವನ್ನು ಪರಿಶೀಲಿಸಿದ ವೇಳೆ 04 ಜಾನುವಾರುಗಳನ್ನು ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ಜಾನುವಾರುಗಳನ್ನು ಹಾಗೂ ಸಾಗಾಟಕ್ಕೆ ಉಪಯೋಗಿಸಿದ ವಾಹನವನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಅ.ಕ್ರ 31/2024, ಕಲಂ : 5,7,12 ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಅಧಿನಿಯಮ 2020 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.