ವಿಟ್ಲ: ಮನೆ ನಿರ್ಮಾಣ ಮಾಡಿದ ವಿಚಾರವಾಗಿ ಹಿಂದೂ ಸಂಘಟನೆಯ ಇತ್ತಂಡದ ಮಧ್ಯೆ ಮಾರಾಮಾರಿ ನಡೆದ ಘಟನೆ ವಿಟ್ಲ ಸಮೀಪದ ಪೆರುವಾಯಿ ಎಂಬಲ್ಲಿ ನಡೆದಿದೆ.
ಈ ಬಗ್ಗೆ ಇತ್ತಂಡದವರು ಆಸ್ಪತ್ರೆಗೆ ದಾಖಲಾಗಿ ದೂರು-ಪ್ರತಿದೂರು ನೀಡಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಇತ್ತಂಡದ ಮೇಲೆ ಪ್ರಕರಣ ದಾಖಲಾಗಿದೆ.
ಘಟನೆಯಲ್ಲಿ ಗಾಯಗೊಂಡ ಒಂದು ತಂಡದ ಯತೀಶ್ ಮತ್ತು ಕಿರಣ್ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾದರೆ, ಮತ್ತೊಂದು ತಂಡದ ಮುಳಿಯ ನಿವಾಸಿ ರಾಜೇಶ್ ಪುತ್ತೂರಿನ ಇನ್ನೊಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೆರುವಾಯಿ ಅಶ್ವಥನಗರ ನಿವಾಸಿ ಯತೀಶ್ ಎಂಬವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೆರುವಾಯಿ ಗ್ರಾಮದ ಪೆರುವಾಯಿ ಜಂಕ್ಷನ್ ಬಳಿ ಯತೀಶ್ ಮತ್ತು ಕಿರಣ್ ಕುಮಾರ್ ರವರು ಇದ್ದಾಗ ಆರೋಪಿಗಳಾದ ಚೇತನ್ ,ರಾಜೇಶ್, ರಾಕೆಶ್, ನಿಶಾಂತ್, ಮೆಘನಾಥ ಬಂದು ಯತೀಶ ಮತ್ತು ಕಿರಣ್ ನನ್ನು ತಡೆದು ನಿಲ್ಲಿಸಿ ಅವರ ಪೈಕಿ ಚೇತನ್ ಬಂದು ಯತೀಶ್ ರವರ ಎಡ ಕಣ್ಣಿನ ಬಳಿ ಹೊಡೆದಾಗ ಬಿಡಿಸಲು ಬಂದ ಕಿರಣ್‌ಕುಮಾರ್ ರಿಗೂ ಮತ್ತು ಯತೀಶ್ ಗೆ ಆರೋಪಿಗಳಾದ ಮೋಹನ್ ,ರಾಜೇಶ್, ಚೇತನ್, ರಾಕೇಶ್, ನಿಶಾಂತ ಮತ್ತು ಮೇಘನಾಥರವರು ಬಂದು ಕೈಯಿಂದ ಹಲ್ಲೆ ನಡೆಸಿದ್ದಾರೆ.
ಆಸುಪಾಸಿನವರು ಬಂದು ಬಿಡಿಸಿದಾಗ ಆರೋಪಿಗಳೆಲ್ಲರೂ ಯತೀಶ್ ಹಾಗೂ ಕಿರಣ್ ರವರ ಬಳಿ ನಾರಾಯಣ ಆಚಾರ್ಯ ರವರ ಮನೆ ನಿರ್ಮಾಣದ ಬಗ್ಗೆ ಬಂದರೆ ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ.
ಪೆರುವಾಯಿ ಗ್ರಾಮದ ಅಶ್ವಥನಗರ ಎಂಬಲ್ಲಿ ನಾರಾಯಣ ಆಚಾರ್ಯರವರಿಗೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದವರು ಹಣ ಸಂಗ್ರಹಿಸಿ ಆಶ್ರಯ ಕಾಲೋನಿಯಲ್ಲಿ ಮನೆ ಮಾಡಿಕೊಟ್ಟಿದ್ದರಿಂದ ನೆರೆಯ ಮೋಹನ್‌ರವರ ಮನೆಗೆ ಹೋಗುವ ರಸ್ತೆಯ ಸಮಸ್ಯೆಯಾಗಿದ್ದೇ ಈ ಹಲ್ಲೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಪ್ರತಿದೂರು:
ಅಳಿಕೆ ಗ್ರಾಮದ ಮುಳಿಯ ನಿವಾಸಿ ರಾಜೇಶ್ ಗಾಯಗೊಂಡು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಯತೀಶ್ ಮತ್ತು ಇತರರ ವಿರುದ್ಧ ಪ್ರತಿದೂರು ನೀಡಿದ್ದಾರೆ.
ಪೆರುವಾಯಿ ಗ್ರಾಮದ ಪೆರುವಾಯಿ ಜಂಕ್ಷನ್‌ನಲ್ಲಿ ರಾಜೇಶ್ ಇದ್ದ ಸಮಯ ಆರೋಪಿಗಳಾದ ಮೋಕ್ಷಿತ್, ಯತೀಶ್, ವಿನಿತ, ಕಿರಣ್ ತಡೆದು ನಿಲ್ಲಿಸಿ ಪರಿಶಿಷ್ಟ ಜಾತಿಯವರಿಗೆ ಮನೆಯನ್ನು ಮುಸ್ಲಿಮರು ಕಟ್ಟಿ ಕೊಟ್ಟದಕ್ಕೆ ನೀನು ಸಪೋರ್ಟ್ ಮಾಡುತ್ತಿಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಅವರ ಪೈಕಿ ,ಮೋಕ್ಷಿತ್ ಕೈಯಿಂದ ರಾಜೇಶ್ ರವರ ಬೆನ್ನಿಗೆ ಹೊಡೆದಾಗ ಯತೀಶ್,ವಿನಿತ್, ಕಿರಣ್ ರಾಜೇಶ್ ರವರ ಬೆನ್ನಿಗೆ ಹಲ್ಲೆ ನಡೆಸಿ, ಕಾಲಿನಿಂದ ಕಾಲಿಗೆ ತುಳಿದು, ದೂಡಿ ಹಾಕಿದಾಗ ರಾಜೇಶ್ ಬೊಬ್ಬೆ ಹೊಡೆದಿದ್ದಾರೆ.
ಈ ವೇಳೆ ಆಸುಪಾಸಿನವರು ಬಂದು ಬಿಡಿಸಿದ್ದು, ಅವರೆಲ್ಲರೂ ಸೇರಿ ರಾಜೇಶ್ ರವರಿಗೆ ಮುಂದಕ್ಕೆ ನಮ್ಮ ವಿಷಯಕ್ಕೆ ಬಂದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.