ಪುತ್ತೂರು : ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಪೆರಾಜೆಯಲ್ಲಿ ಸೈಡ್ ಕೊಡುವ ವಿಚಾರದಲ್ಲಿ ಲಾರಿ ಚಾಲಕನಿಗೆ ಹಲ್ಲೆ ನಡೆಸಿ, ಕಾರಿನಲ್ಲಿ ಪರಾರಿಯಾದ ತಂಡವೊಂದು ಉಪ್ಪಿನಂಗಡಿ ನೆಕ್ಕಿಲಾಡಿ ಚೆಕ್ ಪಾಯಿಂಟ್‌ನಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಪುತ್ತೂರು ರಸ್ತೆಯಲ್ಲಿ ಪ್ರಯಾಣಿಸಿ ಕೆಮ್ಮಾಯಿಯಲ್ಲಿ ಪುತ್ತೂರು ಪೊಲೀಸರ ವಶವಾದ ಘಟನೆ ಜೂ.2ರಂದು ಸಂಜೆ ನಡೆದಿದೆ. ಈ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದು ಅವರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಘಟನೆಯೂ ನಡೆದಿರುವುದಾಗಿ ವರದಿಯಾಗಿದೆ.
ನಶೆಯಲ್ಲಿದ್ದ ತಂಡ: ಕಾರಿನಲ್ಲಿದ್ದವರು ಅಮಲು ಪದಾರ್ಥ ಸೇವನೆ ಮಾಡಿದ್ದರೆನ್ನಲಾಗಿದೆ. ನಶೆಯಲ್ಲಿದ್ದ ಇವರು ಎಸ್.ಐ ಜಂಬೂರಾಜ್ ಮಹಾಜನ್, ಜೀಪು ಚಾಲಕ ಕೀರ್ತನ್‌ರವರೊಂದಿಗೆ ಮಾತಿನ ಚಕಮಕಿ ನಡೆಸಿದ್ದಲ್ಲದೆ ಹಲ್ಲೆ ನಡೆಸಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಬಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳೊಂದಿಗೆ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ವೇಳೆ ಗಾಯಗೊಂಡ ಪೊಲೀಸ್ ಸಿಬ್ಬಂದಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದು, ಬಂಧಿತರನ್ನು ಮಂಗಳೂರು ಉಳ್ಳಾಲ ಕೋಟೆಪುರದ ಮೊಹಮ್ಮದ್ಅರಾಫತ್ (35) ಯು.ಕೆ.ನಾಸಿರ್ (38ವ), ಮಂಗಳೂರು ಸೋಮೇಶ್ವರ ಕುಂಪಲ ನಿವಾಸಿ ಮಹಮ್ಮದ್ ಆಸಿಫ್ (48ವ) ಎಂದು ಗುರುತಿಸಲಾಗಿದೆ. ಈ ಘಟನೆಯ ಭಾಗಿಯಾಗಿದ್ದ ಓರ್ವ ಆರೋಪಿ ಆಫೈನ್ ಪರಾರಿಯಾಗಿರುವುದಾಗಿ ವರದಿಯಾಗಿದೆ. ಆರೋಪಿಗಳ ಕಾರನ್ನು ಪೊಲೀಸರು ವಶಕ್ಕೆ
ಪಡೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಪುತ್ತೂರು ಮತ್ತು ಉಪ್ಪಿನಂಗಡಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.