ಪುತ್ತೂರು: ಕೋವಿಡ್ 3ನೇ ಅಲೆ ಬರುವ ಕುರಿತು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಇದನ್ನು ಎದುರಿಸುವಲ್ಲಿ ಸರಕಾರ ಯಾವುದೇ ತಯಾರಿ ಮಾಡಿಲ್ಲ ಎಂದು ಆರೋಪಿಸುವ ಮೂಲಕ ದೇಶ ವ್ಯಾಪಿ ಉಚಿತ ಕೊರೋನಾ ಲಸಿಕೆ ನೀಡಿಕೆ ಮಾಡುವಂತೆ ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಅಭಿಯಾನ ಆಯೋಜಿಸಿದ್ದು, ಪುತ್ತೂರು ಮತ್ತು ವಿಟ್ಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ‘ ಸಾರ್ವತ್ರಿಕ ಉಚಿತ ಲಸಿಕೆಗಾಗಿ ಮಾತನಾಡಿ’ ಅಭಿಯಾನ ಮಾಡಿ ಉಚಿತ ಲಸಿಕೆ ನೀಡುವಂತೆ ರಾಷ್ಟ್ರಪತಿಗಳಿಗೆ ಪುತ್ತೂರು ಸಹಾಯಕ ಕಮೀಷನರ್ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಕೇಂದ್ರ ಸರಕಾರವು ಕೊರೋನಾ ೩ ನೇ ಅಲೆಯನ್ನು ಯಶಸ್ವಿಯಾಗಿ ತಡೆಯಲು ಬೇಕಾದ ಕಾರ್ಯತಂತ್ರ ರಚಿಸುವಲ್ಲಿ ವಿಫಲವಾಗಿದೆ. ದೇಶದಲ್ಲಿ ಕೊರೋನಾ ಲಸಿಕೆಗೆ ಏಕರೂಪದ ದರ ಇಲ್ಲದೇ ಇರುವುದರಿಂದ ಬಹಳಗೊಂದಲಕ್ಕೆ ಕಾರಣವಾಗಿದೆ ಮತ್ತು ನಿಧಾನಗತಿಯ ಲಸಿಕಾ ಕರಣದಿಂದ ೩ ನೇ ಅಲೆಯನ್ನು ಯಶಸ್ವಿಯಾಗಿ ನಿಭಾಯಿಸಲು ತೊಂದರೆ ಉಂಟುಮಾಡುತ್ತಿದೆ. ಅದುದರಿಂದ ದೇಶದಲ್ಲಿ ಪ್ರತಿದಿನ ೧ ಕೋಟಿ ಲಸಿಕೆಯಂತೆ ಎಲ್ಲರಿಗೂ ಉಚಿತವಾಗಿ ನೀಡಬೇಕಾಗಿ ಮನವಿಯಲ್ಲಿ ವಿನಂತಿಸಲಾಗಿದೆ. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯಂ.ಬಿ ವಿಶ್ವನಾಥ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ.ರಾಜಾರಾಂ ಕೆ.ಬಿ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್. ಮಹಮ್ಮದ್ ಅಲಿ, ಜಾನ್ ಸಿರೀಲ್ ರೊಡ್ರಿಗಸ್ ಮತ್ತು ಸಿಮ್ರಾನ್ ಮನವಿಯ ಸಂದರ್ಭ ಉಪಸ್ಥಿತರಿದ್ದರು.