ಮಾನವತೆ ಇರುವಲ್ಲಿ ಅಮಾನುಷ ಕಾರ್ಯಗಳಿಲ್ಲ, ಇದು ಮಾನವರಲ್ಲಿ ಮಾತ್ರ ಕಾಣಸಿಗಬಹುದೆಂಬ ಪಾಠ ನಮ್ಮ ಬಾಲ್ಯದಲ್ಲಿ ಕೇಳಿದ್ದೇವೆ, ಅನುಭವಿಸಿದ್ದೇವೆ.ಅದು ಹೆಚ್ಚಲ್ಲ ನಲುವತ್ತು ವರ್ಷಗಳ ಹಿಂದೆಯಷ್ಟೇ. ಹಿರಿಯ-ಕಿರಿಯ ಸಂಬಂಧಗಳ, ಗೌರವದ, ಮನೋಭಾವನೆಗಳ ವ್ಯತ್ಯಾಸ ವರ್ತಮಾನ ಮತ್ತು ಭೂತಕಾಲಕ್ಕೂ ಅಜಗಜಾಂತರ. ಕಾರಣಗಳ ಬೆನ್ನತ್ತಿ ಹೋದಾಗ ಕಾಲ ಬದಲಾಗಿದೆ ಎನ್ನುವ ಉಡಾಫೆಯ ಮಾತು ಕೇಳುತ್ತದೆ.ಪ್ರಸ್ತುತ ಮನೆಯಲ್ಲಿ ಹಿರಿಯರ ಮಮಕಾರ ವ್ಯಾಮೋಹಕ್ಕೆ ಸಿಲುಕಿದ ಮಕ್ಕಳು ಸಂಸ್ಕಾರದ ಶಿಕ್ಷಣವಿಲ್ಲದೆ ಬಲಿಯುವರು. ಶಾಲೆಯಲ್ಲಿ ಪಾಶ್ಚಾತ್ಯರಿಂದ ಬಳುವಳಿ ಪಡೆದ ಶಿಕ್ಷಣ ನೀತಿಯೊಳಗೆ ಭೀತಿಯಿಲ್ಲದೆ ಬೆಳೆಯುವರು. ಈಗ ಹೇಳಿ ಸಂಸ್ಕಾರ ಮಾನವೀಯತೆಯ ಶಿಕ್ಷಣ ಕೇವಲ ಬೊಗಳೆ ಯಷ್ಟೇ ವಿನಹ ವಾಸ್ತವಕ್ಕಿದೆಯೇ? ಈ ಗೌರವದ ಮತ್ತು ಜೀವನಕ್ಕೆ ಪೂರಕವಾಗಬೇಕಾದ ಈ ಶಿಕ್ಷಣ “ಆಟಕ್ಕುಂಟು ಲೆಕ್ಕಕ್ಕಿಲ್ಲ” ಅಷ್ಟೇ. ಆಶ್ರಮಕ್ಕೆ ಐಶಾರಾಮದ ಕೊಠಡಿ ಕಟ್ಟಲು ದಾನ ನೀಡಿ ಅದರಲ್ಲಿ ಕೊನೆಗಳಿಗೆಯಲ್ಲಿ ಪ್ರೀತಿ ಕೊಡಬೇಕಾದ ಅಪ್ಪ-ಅಮ್ಮರನ್ನು ಸೇರಿಸುವ ವ್ಯವಸ್ಥೆ ರೂಢಿಯಲ್ಲಿ ಈಗಾಗಲೇ ಇದೆ. ಅಲ್ಲಿ ಹುಟ್ಟುಹಬ್ಬ ಆಚರಿಸುವ ವಾಡಿಕೆ ಮಾಡಿಕೊಂಡ ಪೋಷಕರ ಜೊತೆ ಬರುವ ಮಕ್ಕಳು ಕನಿಕರ ತೋರುವ ಬದಲು ಮುಂದೊಂದು ದಿನ ತನ್ನ ಹೆತ್ತವರಿಗೆ ಒಳ್ಳೆಯ ವ್ಯವಸ್ಥೆ ಎಂದುಕೊಂಡೇ ಹೊರಡುತ್ತಾರೆ.
ಮುದ್ದು ಮಾಡಿ, ಬಾಲ್ಯ,ಯವ್ವನ, ವಿವಾಹ ಎಲ್ಲವನ್ನು ಮೋಹದಿಂದ ಮಡಿಲಲ್ಲಿಟ್ಟು ನಡೆಸಿ ಕೊಟ್ಟರೂ ಸಾಕಾಗದೆ, ನಿವೃತ್ತಿಯ ಬಳಿಕ ಇನ್ಯಾರದೋ ಆಶ್ರಯದಲ್ಲೇ ಬದುಕಬೇಕಾಗಿರುವ ಅನಿವಾರ್ಯತೆ ಒದಗುತ್ತದೆ. ಹೇಗಿದೆ ನಮ್ಮ ಮಾನವೀಯತೆಯ ಶಿಕ್ಷಣ ಹೇಳಿ. ಪಾಶ್ಚಾತ್ಯ ರಾಷ್ಟ್ರಗಳ ಅಮಾನವೀಯ ಸಂಬಂಧಗಳನ್ನು ಆಧುನೀಕರಣವೆಂದು ಬಗೆದು ನಮ್ಮ ದೇಶಕ್ಕೆ ಆಮದೀಕರಿಸಿ ಎಲ್ಲೂ ಇಲ್ಲದ ಸನಾತನ ಭಾರತೀಯ ಸಂಸ್ಕಾರಕ್ಕೆ ಧಕ್ಕೆಯಾದರೂ ಯಾಕೆ ಮಾಡುತ್ತೀರಿ. ನಮ್ಮ ಮಕ್ಕಳು ಸಂಸ್ಕಾರ ಕಲಿತು ಮಾತೃದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ ಗಳನ್ನು ರೂಢಿಸಿಕೊಳ್ಳಬೇಡವೇ? ಮಕ್ಕಳನ್ನು ಹೊಡೆಯದೆ, ಗದರಿಸದೆ ನೋಡಿಕೊಳ್ಳಬೇಕು ಎಂಬ ತಜ್ಞರ ಕಾನೂನನ್ನು ಒಪ್ಪಿಕೊಳ್ಳೋಣ. ಆದರೆ ಪೆನ್ನು ಪುಸ್ತಕ ಹಿಡಿಯಬೇಕಾದ ಕೈಗಳು ಕಾನೂನನ್ನು ಕೈಯಲ್ಲಿ ಹಿಡಿದು ಗುರುಗಳನ್ನೋ, ತಂದೆ ತಾಯಿಯರನ್ನೋ ಪೇಚಿಗೆ ಸಿಲುಕಿಸುವ ವೃತ್ತಾoತ ನಾವೆಲ್ಲಾ ಮಾಧ್ಯಮಗಳಲ್ಲಿ ಕಾಣುತ್ತಿಲ್ಲವೇ? ಎಲ್ಲಿದೆ ದೇವೋಭವಗಳು? ಪರೋಪಕಾರ, ಹಿರಿಯರ ಬಗೆಗಿನ ಕಾಳಜಿ!! ಹೆಚ್ಚೇಕೆ ಒಂದೊಳ್ಳೆ ಮಾತು, ಅತಿಥಿ ಸತ್ಕಾರ ಇವೆಲ್ಲ ಶಾಲೆಗಳಲ್ಲಿ ಪ್ರಬಂಧಕ್ಕೆ ಮೀಸಲಾಗಿದೆಯಲ್ಲದೆ ವಾಸ್ತವಿಕತೆಯಲ್ಲಿದೆಯೇ? ಪುಟಾಣಿ ಮಕ್ಕಳು ತಮ್ಮ ಉದ್ಯೋಗಕ್ಕೋ, ನಿತ್ಯ ಕೆಲಸಕ್ಕೋ ತೊಂದರೆಯಾಗುವುದೆಂದು ಎರಡರ ವಯಸ್ಸಿಗೆ ಶಾಲೆ ಯಾ ಶಿಶುವಿಹಾರ ಸೇರುತ್ತವೆ. ಆಗ ನೋಡಿಕೊಳ್ಳುವವರ ಸಂಸ್ಕಾರ ಬರುತ್ತದೆಯಲ್ಲದೆ ಮನೆಯ ಸಂಸ್ಕಾರ ಬರಲು ಸಾಧ್ಯವೇ? ಅಪ್ಪ ಅಮ್ಮ ಅಜ್ಜ ಅಜ್ಜಿಯ ಮಡಿಲಲ್ಲಿ ಪ್ರೀತಿ ಕಾಣಬೇಕಾದ ಮುಗ್ದ ಮಗು ಪ್ರೀತಿಗಾಗಿ ಹಂಬಲಿಸುತ್ತಿರುವಾಗ ತಮ್ಮ ಸಲಿಲತೆಗೆ ಯಾವುದೋ ಅಮ್ಮನ ಮಡಿಲಿಗೆ ದೂಡಲಿಲ್ಲವೇ? ಹೀಗೆ ವಂಚಿತರಾದ ಆ ಮಕ್ಕಳು ನಿರ್ದಾಕ್ಷಿಣ್ಯವಾಗಿ ನಮ್ಮನ್ನು ಆಶ್ರಮಕ್ಕೆ ತಳ್ಳಿದರೆ ಆಶ್ಚರ್ಯವೇನು? ಬಿತ್ತಿದಂತೆ ಬೆಳೆಯಲ್ಲವೇ?
“ಜೀವನದ ಬಗೆ ಬಗೆಯ ಪರೀಕ್ಷೆಗಳು ನಿಮ್ಮ ಬಲವನ್ನು ಪರೀಕ್ಷಿಸುತ್ತವೆ.ಅವುಗಳ ಮೂಲಕ ನೀವು ಬಲಿಷ್ಠರಾಗುತ್ತಲೇ ಇರುತ್ತೀರಿ.” ಸುಭಾಷಿತ ಸತ್ಯವೇ. ಆದರೆ ಇಂತಹ ಸನ್ನಿವೇಶಗಳನ್ನು ನಮ್ಮವರಿಗೆ ನಾವೆಷ್ಟು ನೀಡುತ್ತೇವೆ ಎಂಬುದೇ ಪ್ರಶ್ನೆ. ಈ ಪರೀಕ್ಷೆಗಳು ಕೇವಲ ತರಗತಿಗಳಲ್ಲಿ ನಡೆಯುತ್ತವೆ ವಿನಃ ಬಾಲ್ಯ ಜೀವನದಲ್ಲಿ ಎದುರಿಸಿ ಅಭ್ಯಾಸವಿಲ್ಲದೆ, ಜೀವನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗದೆ ಎಳೆ ಜೀವಗಳು ತಾವಾಗಿಯೇ ಸಾವಿನ ಮೊರೆ ಹೋಗುತಿವೆ. ಜೀವಿತಾವಧಿಯಲ್ಲಿ ತಮ್ಮ ಜೀವನದ ಅನುಭವಗಳ ಜೊತೆ ತಮ್ಮ ಭವಿಷ್ಯಕ್ಕೆ ಸರಿಯಾದ ಉತ್ತರಾಧಿಕಾರಿಗಳನ್ನು ಸೃಷ್ಟಿಸಲು ಮನ ಮಾಡದಿರುವ ದುರಂತ ಯುವ ಜನತೆಯನ್ನು ಕಷ್ಟಕ್ಕೆ ಸಿಲುಕಿಸುವುದು ಅನೇಕ ಬಾರಿ ಕಾಣುತ್ತೇವೆ. ಸ್ವಾರ್ಥಬಿಟ್ಟು ಮಾನವೀಯತೆಯಿಂದ ಮುಂದಿನ ತಲೆಮಾರಿಗೆ ಸರಿಯಾದ ಮಾರ್ಗದರ್ಶನ ಮಾಡುವ ಹೊಣೆಗಾರಿಕೆ ಹಿರಿಯರದ್ದು. “ಯಾರೂ ಮನ ಮಾಡಲಿಲ್ಲ”ಎಂಬ ಪುಸ್ತಕ ನೀಡಿ ತೆರಳಬೇಡಿ ಅಪಾರ ನಷ್ಟವಾಗುತ್ತದೆ. ದಯವಿಟ್ಟು ಅವಕಾಶ ಕೊಟ್ಟು ಪ್ರಯತ್ನಿಸಿ.
ವೇಗವಾಗಿ ಸಾಗುತಿರುವ ಬೆಳವಣಿಗೆಯ ಚಕ್ರದಡಿಗೆ ಮಾನವೀಯತೆ ಎಂಬ ಸಂಸ್ಕಾರ ಸಿಕ್ಕಿಕೊಂಡು ಚೂರಾಗುವ ಮೊದಲು ಜಾಗೃತರಾಗುವ ಮೂಲಕ ಸುಂದರ, ಆತ್ಮೀಯ, ಗೌರವಯುತ, ಮೌಲ್ಯಯುತ ಬದುಕಿನ ನಿರೀಕ್ಷೆಗಾಗಿ ಎಚ್ಚರಿಕೆ ವಹಿಸುವ ಸಣ್ಣ ಪ್ರಯತ್ನವಿರಲಿ. ಎಲ್ಲವೂ ಹಣ ಸಂಪತ್ತಿನಿಂದಲ್ಲ, ಸ್ವಲ್ಪವಾದರೂ ಕನಿಕರ, ದಯೆ, ಸಾಂತ್ವನದಿಂದಾಗುತ್ತವೆ. ಇವೆಲ್ಲ ಬರಿ ಮನಸ್ಸು, ಹೃದಯ – ಮನಸ್ಸುಗಳಲ್ಲಿ ಮೂಡಿದರೆ ಸಾಲದು, ವಾಸ್ತವದಲ್ಲಿ ಅನುಷ್ಠಾನಕ್ಕೆ ಬರಬೇಕು. ಇಲ್ಲವಾದರೆ ಅರಳು ಮರಳು ಜೀವನದಲ್ಲಿ ಹರಳಿನಂತೆ ಹೊರಳಾಡಬೇಕಾದೀತು, ರಸ ಹಿಂಡಿದ ಜಲ್ಲೆಯಂತೆ ಮೂಲೆ ಸೇರಬೇಕಾದೀತು. ಇದು ಎಲ್ಲೋ ನಡೆಯಬೇಕಾದ ಪ್ರಕ್ರಿಯೆಯಲ್ಲ. ನಾಳೆ ನಮ್ಮ ಜೀವನದಲ್ಲೂ ನಿಶ್ಚಿತ.
🖊️ರಾಧಾಕೃಷ್ಣ ಎರುಂಬು