ಕಲ್ಪಿತ ಪಾತ್ರವೊಂದರ ಕಾಯ ಪ್ರವೇಶಿಸಿ ನವಿರಾಗಿ ನಟಿಸಬಲ್ಲ ಅದ್ಭುತ ಕಲಾಪ್ರಕಾರವೇ ‘ಅಭಿನಯ’. ನಟನೆಯೆಂಬ ಕಲೆಯನ್ನು ದೇವರ ಅನುಗ್ರಹ ಎಂದು ಗ್ರಹಿಸಿ ಅದನ್ನು ಬೆಳೆಸಿ ಪೋಷಿಸುತ್ತಿರುವವರಲ್ಲಿ ಕಾಸರಗೋಡಿನ ಬಂಬ್ರಾಣದ ರವೀಂದ್ರ ಶೆಟ್ಟಿ ಮತ್ತು ಶ್ಯಾಮಲಾ ದಂಪತಿಗಳ ಪುತ್ರ ‘ಪ್ರಜ್ವಲ್ ಶೆಟ್ಟಿ’ ಕೂಡಾ ಒಬ್ಬರು.
ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕುಂಬಳೆ ಶ್ರೀ ಕೃಷ್ಣ ವಿದ್ಯಾಲಯದಲ್ಲಿ ಮತ್ತು ಪಿ.ಯು.ಸಿ ಯನ್ನು ಶ್ರೀ ಸತ್ಯಸಾಯಿ ಲೋಕ ಸೇವಾ ವಿದ್ಯಾಸಂಸ್ಥೆ ಅಲಿಕೆಯಲ್ಲಿ ಮುಗಿಸಿ, ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಪಡೆದಿರುತ್ತಾರೆ.ಅಭಿನಯ ಕಲೆಯನ್ನು ಬಾಲ್ಯದಿಂದಲೇ ಕರಗತ ಮಾಡಿಕೊಂಡ ಪ್ರಜ್ವಲ್ ಶೆಟ್ಟಿಯವರು ಅಭಿನಯ ಕ್ಷೇತ್ರದಲ್ಲಿ ಇನ್ನಷ್ಟು ಸಾಧಿಸಬೇಕೆಂಬ ಛಲ ಹೊತ್ತಿರುವ ಯುವ ಕಲಾವಿದ.
ತಾವು ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರುವಾಗ ‘ನಂದಗೋಪಾಲ’ ಎನ್ನುವ ಕನ್ನಡ ನಾಟಕದ ಮೂಲಕ ಕಲಾರಂಗಕ್ಕೆ ಕಾಲಿಟ್ಟ ಇವರು ಇಂದು ಹಲವಾರು ವೇದಿಕೆಗಳಲ್ಲಿ ತಮ್ಮ ಕಲಾ ಪ್ರದರ್ಶನದ ಅವಕಾಶಗಳನ್ನು ಗಿಟ್ಟಿಸಿಕೊಂಡು ಕಲಾರಸಿಕರ ಮನ ಗೆದ್ದಿದ್ದಾರೆ.ಸಣ್ಣ ವಯಸ್ಸಿನಲ್ಲಿಯೇ ಬಂಟರ ಸಂಘದ ವತಿಯಿಂದ ನಡೆಸಿದಂತಹ ನಾಟಕ ಸ್ಪರ್ಧೆಗಳಲ್ಲಿ ತಮ್ಮ ನಟನಾ ಕೌಶಲವನ್ನು ಪ್ರದರ್ಶಿಸಿ ಬಾಲನಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.ಹೀಗೆ ಶುರುವಾದ ಇವರ ಕಲೆಯ ಮೇಲಿನ ಒಲವು ಮುಂದೆ ತಮ್ಮನ್ನು ಪೂರ್ತಿಯಾಗಿ ಕಲೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಯಿತು. ಶಾಲಾ ದಿನಗಳಲ್ಲಿ ಕಲೋತ್ಸವಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಅಭಿನಯದ ಜೊತೆಗೆ ಭಾವಗೀತೆಯನ್ನೂ ಅದ್ಭುತ ಕಂಠದಲ್ಲಿ ಹಾಡಬಲ್ಲ ಇವರು ಕೇರಳ ಶಾಲಾ ಕಲೋತ್ಸವದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ.
ಪದವಿ ಜೀವನಕ್ಕೆ ತಲುಪಿದಾಗ ಕಲಾಕ್ಷೇತ್ರದಲ್ಲಿ ಇನ್ನಷ್ಟು ಅವಕಾಶಗಳು ಇವರನ್ನರಸಿ ಬಂದುವು.ವಿದೇಶದಲ್ಲಿ ‘ಅಮ್ಮ ಕಲಾವಿದೆರ್’ ತಂಡದಲ್ಲಿ ಅತಿಥಿ ಕಲಾವಿದನಾಗಿ ‘ಪಿರ ಬನ್ನಗ’ ಎನ್ನುವ ನಾಟಕದಲ್ಲಿ ಅಭಿನಯಿಸಿರುತ್ತಾರೆ.ಮುಂದೆ ಕಲರ್ಸ್ ಕನ್ನಡ ವಾಹಿನಿಯ ‘ಕಾಮಿಡಿ ಕಂಪೆನಿ’ ಎನ್ನುವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ನಾಟಕ ರಂಗದಲ್ಲಿ ಅಂಬೆಗಾಲಿಟ್ಟು ಬೆಳೆದು ಬಂದ ಪ್ರಜ್ವಲ್ ಶೆಟ್ಟಿಯವರು ಕನ್ನಡ ಮತ್ತು ತುಳು ಚಿತ್ರರಂಗಕ್ಕೆ ಕಾಲಿಟ್ಟು ಈಗಾಗಲೇ ‘ಕನಸು ಮಾರಟಕ್ಕಿದೆ’,’ನಾನ್ ವೆಜ್’, ‘2 ಎಕರೆ’, ‘ಕ್ರೈಮ್ ಟಾಕೀಸ್’,’ಲಗೋರಿ’,’ಬಿಂಗಿರಿ’ ಎಂಬಿತ್ಯಾದಿ ಚಿತ್ರಗಳಲ್ಲಿ ಅಭಿನಯಿಸಿರುತ್ತಾರೆ.ಇನ್ನಷ್ಟು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಉತ್ಸುಕರಾಗಿದ್ದಾರೆ.ಪ್ರಸ್ತುತ ಚಿತ್ರಗಳಲ್ಲಿ ಸಂಘಟಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.’ಹಾಸ್ಟೆಲ್ ಹುಡುಗರು’,’ಕೈಲಾಸ’, ಹಾಗೆಯೇ ‘ಇಂಗ್ಲೀಷ್’ ತುಳು ಸಿನೆಮಾದಲ್ಲಿ ಕೆಲಸ ನಿರ್ವಹಿಸಿರುತ್ತಾರೆ.
ನಾಟಕ ರಂಗದಲ್ಲಿ ನಿರ್ದೇಶಕರಾದ ಸುರೇಶ್ ಶೆಟ್ಟಿ ಜೋಡುಕಲ್ಲು ಸ್ಫೂರ್ತಿಯಾದರೆ ಸಿನೆಮಾ ರಂಗದಲ್ಲಿ ‘ಎಕ್ಕಸಕ’ ತುಳು ಚಿತ್ರ ನಿರ್ದೇಶಕರಾದ ಕೆ.ಸೂರಜ್ ಶೆಟ್ಟಿಯವರು ಮಾರ್ಗದರ್ಶಕರಾಗಿದ್ದಾರೆ.ಬಾಲ್ಯದಿಂದಲೇ ಕುಟುಂಬ ಮತ್ತು ಗೆಳೆಯರಿಂದ ಲಭಿಸಿದ ಪ್ರೋತ್ಸಾಹವು ಇವರ ಸಾಧನೆಗಳಿಗೆ ದಾರಿದೀಪವಾಯಿತು.ಹಾಗೆಯೇ ತೆರೆಮರೆಯಲ್ಲಿನ ಕೆಲವು ಕಲಾಗಾರರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಿ ಅವರನ್ನು ಕಲಾರಂಗಕ್ಕೆ ಪರಿಚಯಿಸಿದ್ದಾರೆ.ತಾನು ಬೆಳೆಯುವುದರೊಂದಿಗೆ ಇತರರನ್ನೂ ಪ್ರೋತ್ಸಾಹಿಸುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು ಎನ್ನುವುದು ಇವರ ಅಭಿಪ್ರಾಯ.
ಭವಿಷ್ಯದಲ್ಲಿ ಇನ್ನಷ್ಟು ಚಿತ್ರಗಳಲ್ಲಿ ಅಭಿನಯಿಸಿ ತಮ್ಮದೇ ಆದ ಛಾಪು ಮೂಡಿಸಿ ಕಲೆಗೆ ತನ್ನಿಂದಾಗುವ ಕೊಡುಗೆಯನ್ನು ನೀಡಬೇಕೆಂಬ ಕನಸು ಹೊತ್ತಿದ್ದಾರೆ.ಕಲೆಯನ್ನು ಆರಾಧಿಸಿದರೆ ಕಲೆಗೆ ನಮ್ಮಿಂದಾಗುವ ಕೊಡುಗೆಯನ್ನು ನೀಡಿದರೆ ಕಲೆ ಎಂದಿಗೂ ಕೈ ಬಿಡುವುದಿಲ್ಲ ಎಂಬುದು ಇವರ ನಂಬಿಕೆ.ಈ ನಂಬಿಕೆ ಮತ್ತು ಸತತ ಪ್ರಯತ್ನದಿಂದ ಯುವ ಕಲಾವಿದರಾದ ಪ್ರಜ್ವಲ್ ಶೆಟ್ಟಿಯವರು ಚಿತ್ರರಂಗದಲ್ಲಿ ಭರವಸೆಯ ಹೆಜ್ಜೆಯಿಡುತ್ತಿದ್ದಾರೆ.
✍️. ತೇಜಶ್ರೀ ಶೆಟ್ಟಿ ಬೇಳ