ನವದೆಹಲಿ : ಮೈಕ್ರೋಸಾಫ್ಟ್ ಸಾಫ್ಟ್‌ವೇರ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ವಿಮಾನ, ಸೂಪರ್‌ಮಾರ್ಕೆಟ್, ಬ್ಯಾಂಕಿಂಗ್ ಸೇರಿದಂತೆ ಅನೇಕ ವಲಯಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.
ತಾಂತ್ರಿಕ ಸಮಸ್ಯೆಯಿಂದ ಭಾರತದ ಇಂಡಿಗೋ, ಸ್ಪೈಸ್‌ಜೆಟ್ ಮತ್ತು ಆಕಾಶ ಏರ್ ಬುಕಿಂಗ್, ಚೆಕ್-ಇನ್ ಮತ್ತು ಫ್ಲೈಟ್ ನವೀಕರಣಗಳ ಸೇವೆ ಮೇಲೆ ಪರಿಣಾಮ ಬೀರಿದೆ.
ದೆಹಲಿ ಹಾಗೂ ಬೆಂಗಳೂರು ವಿಮಾನ ನಿಲ್ದಾಣದಲ್ಲೂ ಸಮಸ್ಯೆ ತಲೆದೋರಿದೆ. ಸಮಸ್ಯೆ ಕುರಿತು ಪ್ರತಿಕ್ರಿಯಿಸಿರುವ ಮೈಕ್ರೋಸಾಫ್ಟ್, ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.
ತಾಂತ್ರಿಕ ಸಮಸ್ಯೆಯಿಂದಾಗಿ ಹೈದರಾಬಾದ್ ಏರ್ಪೋರ್ಟ್‌ನಲ್ಲಿ ಕೈಬರಹದಲ್ಲೇ ಬೋರ್ಡಿಂಗ್ ಪಾಸ್ ವಿತರಣೆ ಮಾಡಲಾಗುತ್ತಿದೆ. ಲಂಡನ್ ಸ್ಟಾಕ್ ಎಕ್ಸ್‌ಚೇಂಜ್ ಸೇವೆಯಲ್ಲೂ ವ್ಯತ್ಯಯವಾಗಿದೆ. ಸ್ಕೈ ನ್ಯೂಸ್, ಆಸ್ಟ್ರೇಲಿಯಾದ ಎಬಿಸಿ ನ್ಯೂಸ್ ಪ್ರಸಾರ ಸ್ಥಗಿತಗೊಂಡಿದೆ. ಬ್ರಿಟನ್‌ನಲ್ಲೂ ರೈಲು ಸೇವೆ ಸ್ಥಗಿತವಾಗಿದೆ. ಭಾರತದ ಐಟಿ ಇಲಾಖೆಯಿಂದ ಮೈಕ್ರೋಸಾಫ್ಟ್ ಸಂಸ್ಥೆ ಜೊತೆ ಸಂಪರ್ಕ ಸಾಧಿಸಲಾಗುತ್ತಿದೆ.
ವಿಮಾನ ಕಾರ್ಯಾಚರಣೆಯ ಅಡೆತಡೆಗಳ ಕುರಿತು ನವೀಕರಣಗಳನ್ನು ಒದಗಿಸುವಲ್ಲಿ ನಾವು ಪ್ರಸ್ತುತ ತಾಂತ್ರಿಕ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಈ ಸಮಸ್ಯೆಯನ್ನು ಪರಿಹರಿಸಲು ನಮ್ಮ ತಂಡವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಯಾವುದೇ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ನಿಮ್ಮ ತಾಳ್ಮೆ ಮತ್ತು ಸಹಕಾರಕ್ಕಾಗಿ ಧನ್ಯವಾದಗಳು ಎಂದು ಸ್ಪೈಸ್‌ಜೆಟ್ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದೆ.
ದೆಹಲಿ ವಿಮಾನ ನಿಲ್ದಾಣವು ಕೆಲವು ಸೇವೆಗಳ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದೆ. ಜಾಗತಿಕ ಐಟಿ ಸಮಸ್ಯೆಯಿಂದಾಗಿ, ದೆಹಲಿ ವಿಮಾನ ನಿಲ್ದಾಣದಲ್ಲಿನ ಕೆಲವು ಸೇವೆಗಳು ತಾತ್ಕಾಲಿಕವಾಗಿ ಪರಿಣಾಮ ಬೀರಿವೆ. ನಮ್ಮ ಪ್ರಯಾಣಿಕರಿಗೆ ಎದುರಾಗಿರುವ ಅನಾನುಕೂಲತೆಯನ್ನು ಕಡಿಮೆ ಮಾಡಲು ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಎಂದು ತಿಳಿಸಿದೆ.
ಜಾಗತಿಕ ಮಟ್ಟದಲ್ಲಿ ಸಾಫ್ಟ್‌ವೇರ್ ಸಮಸ್ಯೆಯಿಂದಾಗಿ ಹಲವು ರೀತಿಯ ವ್ಯತ್ಯಯಗಳು ಉಂಟಾಗಿವೆ. ಇಂದು ಬೆಳಗ್ಗೆಯಿಂದ ಎದುರಾದ ಮೈಕ್ರೋಸಾಫ್ಟ್ ತಾಂತ್ರಿಕ ಅಡಚಣೆಯು ವಿಮಾನ ಹಾರಾಟಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ನಿಟ್ಟಿನಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಕಟಣೆಯನ್ನು ಹೊರಡಿಸಿದೆ.
ತನ್ನ ಅಧಿಕೃತ ಟ್ವಿಟ್ಟರ್ (X) ಖಾತೆಯಲ್ಲಿ ಈ ಕುರಿತು ಘೋಷಣೆ ಮಾಡಿದ್ದು, ಜಾಗತಿಕವಾಗಿ ಸಾಫ್ಟ್‌ವೇರ್ ಕ್ಷೇತ್ರದಲ್ಲಾದ ಸಮಸ್ಯೆ ನಿಮಗೆಲ್ಲ ತಿಳಿದೇ ಇದೆ. ಇದು ದೇಶದ ಹಲವು ವಿಮಾನ ನಿಲ್ದಾಣಗಳ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ಮಂಗಳೂರಿನಿಂದ ಬೇರೆ ಬೇರೆ ರಾಜ್ಯ, ದೇಶಗಳಿಗೆ ತೆರಳುವ ಪ್ರಯಾಣಿಕರು ಆಗಿರುವ ಅಡಚಣೆ ಕುರಿತು ಮಾಹಿತಿ ಪಡೆದುಕೊಳ್ಳುವುದು ಉತ್ತಮ ಸಲಹೆ ನೀಡಿದೆ.
ಸಾಫ್ಟ್‌ವೇರ್‌ನಲ್ಲಾದ ತಾಂತ್ರಿಕ ಅಡಚಣೆಯಿಂದ ವಿಮಾನ ಟಿಕೆಟ್ ಬುಕ್ಕಿಂಗ್, ಚೆಕ್-ಇನ್, ಬೋರ್ಡಿಂಗ್ ಪಾಸ್ ಹಾಗೂ ವಿಮಾನದ ಹಾರಾಟದ ಮೇಲೆ ಭಾರೀ ಪರಿಣಾಮ ಬೀರಿದೆ. ಇದರಿಂದಾಗಿ ಮಂಗಳೂರಿನಿಂದ ಹೊರಡುವ ವಿಮಾನಗಳ ಹಾರಾಟದಲ್ಲಿಯೂ ಕೆಲವು ಬದಲಾವಣೆಗಳ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಪ್ರಯಾಣಿಕರು ತಮ್ಮ ಸಂಬಂಧಿತ ವಿಮಾನಯಾನ ಸಂಸ್ಥೆಗಳ ಸಂಪರ್ಕ ಪಡೆದು ಮಾಹಿತಿ ಪಡೆದುಕೊಳ್ಳುವಂತೆ ಮಂಗಳೂರು ಏರ್‌ಪೋರ್ಟ್‌ನ ಅಧಿಕೃತ ಪ್ರಕಟಣೆ ತಿಳಿಸಿದೆ.
ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರವು ಶೀಘ್ರವಾಗಿ ಈ ಸಮಸ್ಯೆ ಪರಿಹರಿಸಲು ಸಂಬಂಧಪಟ್ಟ ಸಂಸ್ಥೆಗಳ ಜೊತೆಗೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ತಿಳಿಸಿದೆ. ಒಟ್ಟಿನಲ್ಲಿ, ಮಂಗಳೂರಿನಲ್ಲಿ ವ್ಯಾಪಕ ಮಳೆ ಸದ್ಯ ವಿಮಾನಗಳ ಹಾರಾಟಕ್ಕೆ ಅಡಚಣೆ ಉಂಟು ಮಾಡದೇ ಹೋದರೂ, ಇದೀಗ ಜಾಗತಿಕ ಮಟ್ಟದಲ್ಲಾದ ತಾಂತ್ರಿಕ ಅಡಚಣೆ ವಿಮಾನ ಹಾರಾಟಕ್ಕೆ ಅಡ್ಡಿಯುಂಟು ಮಾಡಿದೆ.
