ವಯನಾಡ್ : ಗುಡ್ಡ ಕುಸಿತ ನೂರಾರು ನೋವುಗಳ, ಸಂಕಟಗಳ ಸಂಕೇತವಾಗಿ ಭಾರತದ ಇತಿಹಾಸದ ಪುಟದಲ್ಲಿ ಉಳಿದು ಬಿಡಲಿದೆ. ಇಂಥಹದೊಂದು ದುರಂತ ಕೇರಳ ಮಾತ್ರವಲ್ಲ, ಭಾರತವೇ ಹಿಂದೆಂದೂ ಕಂಡಿರಲಿಲ್ಲ. ಒಂದೊಂದು ದೃಶ್ಯವನ್ನು ನೋಡುವಾಗಲು ಕರುಳಲ್ಲಿ ಸಹಿಲಾರದ ಸಂಕಟವೊಂದು ಸರಿದು ಹೋಗುತ್ತಿತ್ತು. ಭೀಕರ ಮಳೆಯಿಂದಾಗಿ ವಯನಾಡ್ನಲ್ಲಿ ಜುಲೈ 31 ರ ಬೆಳಗಿನ ಜಾವ ಸುಮಾರು 21 ಎಕರೆಯಷ್ಟು ವಿಸ್ತಾರದ ಗುಡ್ಡ ಕುಸಿದುಬಿಟ್ಟಿತ್ತು. ಚೂರಲ್ಮಾಲಾ ಅತ್ತಮಾಲಾ ನೂಲ್ಪುಜಾ ಗ್ರಾಮಗಳನ್ನು ಬೆಟ್ಟ ಕುಸಿದ ತೀವ್ರತೆಗೆ ಕೊಚ್ಚಿಕೊಂಡು ಹೋಗಿದ್ದವು. ರಕ್ಷಣಾ ಕಾರ್ಯಾಚರಣೆಯೇ ದೊಡ್ಡ ಸವಾಲಾಗಿತ್ತು. ಎನ್ಡಿಆರ್ಎಫ್ ಎಸ್ಡಿಆರ್ಎಫ್ ಜೊತೆಗೆ ಭಾರತೀಯ ನೌಕಾದಳ ಹಾಗೂ ಭೂದಳ ಜನ ಜಾನುವಾರುಗಳ ರಕ್ಷಣೆಗೆ ಇಳಿದ್ದರು.
ಸುಮಾರು 10 ದಿನಗಳ ಕಾಲ ಈ ರಕ್ಷಣಾ ಕಾರ್ಯಾಚರಣೆ ಸಾಗಿತ್ತು. ಸೇನೆಯ ಸಹಾಯದಿಂದಾಗಿ 138 ಜನರನ್ನು ರಕ್ಷಿಸಲಾಯಿತು. ಇನ್ನೂ ಹಲವಾರು ಜನ ನಾಪತ್ತೆಯಾಗಿರುವುದು ವರದಿಯಾಗಿದೆ.
ಸದ್ಯ ರಕ್ಷಣಾ ಕಾರ್ಯಾಚರಣೆಯನ್ನು ಮುಗಿಸಿದ ಯೋಧರು ತಮ್ಮ ತಮ್ಮ ನೆಲೆಗಳಿಗೆ ಹೋಗುವ ಸಮಯ ಬಂದಿತ್ತು. ಆ ವೇಳೆ, ಅವರು ಬೀಡುಬಿಟ್ಟಿದ್ದ ಮೌಂಟ್ ಟಾಬರ್ ಶಾಲೆಯಿಂದ ಇಂದು ಹೊರಟು ನಿಂತಿದ್ದರು. ಅಲ್ಲಿ ಕೇವಲ ಸೈನಿಕರು ಸೇರಿರಲಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿ ಮಾನವ ಸರಪಳಿ ನಿರ್ಮಿಸಿ, ಪ್ರಾಣ ಕಾಪಾಡಿದ , ಪ್ರಾಣವನ್ನು ಪಣಕ್ಕಿಟ್ಟು ಪ್ರಕೃತಿಯ ಮುನಿಸನ್ನು ಲೆಕ್ಕಿಸದೇ ನೂರಾರು ಜನರ ಪ್ರಾಣ ಉಳಿಸಿದ ವೀರ ಯೋಧರಿಗೆ ಒಂದು ಸಲಾಂ ಹೇಳಿದರು, ಚಪ್ಪಾಳೆ ತಟ್ಟಿ, ಭಾರತ ಮಾತಾಕಿ ಜೈ ಎಂದು ಹೇಳಿ ಸೈನಿಕರಿಗೆ ಗೌರವ ವಿದಾಯ ತಿಳಿಸಿದರು. ಹೆಚ್ಚು ಕಡಿಮೆ ಅಲ್ಲಿ ನೆರೆದಿದ್ದ ಎಲ್ಲರ ಕಣ್ಣಂಚು ತೇವಗೊಂಡಿದ್ದವು. ನಿಜಕ್ಕೂ ಇದೊಂದು ಭಾವುಕ ಬಿಳ್ಕೋಡುಗೆ ಎಂದೇ ಈ ವಿಡಿಯೋವನ್ನು ನೋಡಿದವರು ಹೇಳುತ್ತಿದ್ದಾರೆ.
122 ಇನ್ಫೆಂಟ್ರಿ ಬ್ಯಾಟಲೀಯನ್ ಟೀಮ್ನ ಸತತ 10 ದಿನಗಳ ಕಾಲದ ರಕ್ಷಣಾ ಕಾರ್ಯಾಚರಣೆ ಮುಗಿದಿದೆ. ಮೇಜರ್ ಜನರಲ್ ಮ್ಯಾಥೀವ್ ನೇತೃತ್ವದಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆ ನೂರಾರು ಜೀವಗಳನ್ನು ಉಳಿಸಿದೆ. ಇವರ ಜೊತೆಗೆ ಜಂಟಿಯಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ರಕ್ಷಣಾ ಜವಾಬ್ದಾರಿಯನ್ನು ಹೊತ್ತಿದ್ದರು. ಸೇನೆಯ ಈ ಸಾಹಸ ಪರಾಕ್ರಮಗಳಿಗೆ ದೇಶದ ಪ್ರಜೆಗಳಾದ ನಾವು ವಾಪಸ್ ಏನು ಕೊಟ್ಟರು ಕಡಿಮೆಯೇ ಹೀಗಾಗಿ ವಯನಾಡ್ ಜನರು ಅವರಿಗೆ ಸಲ್ಲಬೇಕಾದ ಗೌರವ ನೀಡಿದ್ದಾರೆ.
ಚಪ್ಪಾಳೆ ತಟ್ಟುವ ಮೂಲಕ, ಈ ನಾಡು ಎಂದಿಗೂ ನಿಮ್ಮ ಉಪಕಾರವನ್ನು ಮರೆಯಲಾರದು ಎಂಬ ಸಂದೇಶದೊಂದಿಗೆ ವೀರ ಯೋಧರನ್ನು ಬಿಳ್ಕೋಟ್ಟಿದ್ದಾರೆ. ಕೊಚ್ಚಿ ಡಿಫೆನ್ಸ್ನ ಪಿಆರ್ಒ ತನ್ನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು. ನೆಲದ ಯೋಧರಿಗೆ ಸಿಕ್ಕ ಇಂಥಹದೊಂದು ಬಿಳ್ಕೋಡುಗೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಇದೇ ತಿಂಗಳು 10ರಂದು ಪ್ರಧಾನಿ ನರೇಂದ್ರ ಮೋದಿ ವಯನಾಡಿಗೆ ಭೇಟಿ ನೀಡಲಿದ್ದಾರೆ.