ಮಂಗಳೂರು : ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಮಿತಿಯಲ್ಲಿ ಶುಕ್ರವಾರ ನಡೆದ ಮಾನವ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 38 ಶ್ರೀಲಂಕಾದ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “38 ಶ್ರೀಲಂಕಾದ ಪ್ರಜೆಗಳು ಮಾ.17ಕ್ಕೆ ತಮಿಳುನಾಡಿಗೆ ಅಕ್ರಮವಾಗಿ ಪ್ರವೇಶಿಸಿ ಒಂದು ತಿಂಗಳ ಹಿಂದೆ ಮಂಗಳೂರಿಗೆ ಬಂದು ಕಳೆದ ಒಂದೂವರೆ ತಿಂಗಳಿನಿಂದ ಎರಡು ಲಾಡ್ಜ್‌ಗಳು ಮತ್ತು ಎರಡು ಖಾಸಗಿ ಮನೆಗಳಲ್ಲಿ ತಂಗಿದ್ದು, ತಾವು ಕೂಲಿ ಕಾರ್ಮಿಕರು ಮತ್ತು ತಮಿಳುನಾಡಿನ ಮೀನುಗಾರ ಎಂದು ಹೇಳಿಕೊಳ್ಳುತ್ತಿದ್ದರು”.
“ಅವರು ಮಾರ್ಚ್ 17 ರಂದು ಶ್ರೀಲಂಕಾದ ಏಜೆಂಟರಿಗೆ 6 ರಿಂದ 10 ಲಕ್ಷ ಶ್ರೀಲಂಕಾದ ರೂಪಾಯಿಗಳನ್ನು ಪಾವತಿಸಿ ಶ್ರೀಲಂಕಾದಿಂದ ಹೊರಟಿದ್ದು, ಅವರು ಕೆನಡಾದಲ್ಲಿ ಉದ್ಯೋಗ ನೀಡುವ ಭರವಸೆ ನೀಡಿದ್ದರು. ದೋಣಿ ಮೂಲಕ ತಮಿಳುನಾಡಿನ ತೂತುಕುಡಿ ತಲುಪಿದ ಬಳಿಕ ಹತ್ತಿರದ ಬಂದರನ್ನು ತಲುಪಿ ಖಾಸಗಿ ದೋಣಿಗಳು ಮತ್ತು ಸರಕು ಹಡಗುಗಳ ಮೂಲಕ ಕೆನಡಾಕ್ಕೆ ಪ್ರಯಾಣಿಸುವುದು ಅವರ ಯೋಜನೆಯಾಗಿತ್ತು. ಆದರೆ ತಮಿಳುನಾಡಿನಲ್ಲಿ ಚುನಾವಣೆ ಮತ್ತು ಪೊಲೀಸರ ಹೆಚ್ಚಿನ ಉಪಸ್ಥಿತಿಯಿಂದಾಗಿ ಅವರನ್ನು ಸ್ವಲ್ಪ ಸಮಯದವರೆಗೆ ಮಂಗಳೂರಿಗೆ ಸ್ಥಳಾಂತರಿಸಲಾಯಿತು. ತಮಿಳುನಾಡಿನಿಂದ ಅವರು ಖಾಸಗಿ ಬಸ್‌ಗಳಲ್ಲಿ ಬೆಂಗಳೂರಿಗೆ ಪ್ರಯಾಣಿಸಿ ಬೆಂಗಳೂರಿನಲ್ಲಿ ಏಜೆಂಟರೂ ಇದ್ದು, ಅಲ್ಲಿಂದ ಮತ್ತೆ ಮಂಗಳೂರು ತಲುಪಿದ್ದಾರೆ.
“ಶ್ರೀಲಂಕಾದ 39 ಮಂದಿ ಇದ್ದು, ಅದರಲ್ಲಿ 38 ಜನರನ್ನು ಬಂಧಿಸಲಾಗಿದೆ. ಸುಮಾರು 65-70 ವರ್ಷ ವಯಸ್ಸಿನ ಒಬ್ಬ ವ್ಯಕ್ತಿ ಕೆಲವು ವಾರಗಳ ಹಿಂದೆ ಮರಳಿದ್ದಾನೆ. ನಾವು ಅವನನ್ನು ಪತ್ತೆ ಮಾಡುತ್ತೇವೆ. ನಾವು ಐಪಿಸಿ ಮಾನವ ಕಳ್ಳಸಾಗಣೆ, ಮೋಸ, ಪಾಸ್‌ಪೋರ್ಟ್ ಕಾಯ್ದೆ 1967, ವಿದೇಶಿಯರ ಕಾಯ್ದೆ 1945 ಮತ್ತು ವಿದೇಶಿಯರ ಆದೇಶ 1948 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಏಜೆಂಟರನ್ನು ಪತ್ತೆಹಚ್ಚಲು ನಾವು ಈ ಪ್ರಕರಣವನ್ನು ಆಳವಾಗಿ ತನಿಖೆ ಮಾಡುತ್ತೇವೆ” ಎಂದರು.
ಇನ್ನು ಯಾರಾದರೂ ಅನುಮಾನಾಸ್ಪದವಾಗಿ ಚಲಿಸುತ್ತಿರುವುದು ಕಂಡುಬಂದರೆ, ನಾಗರಿಕರು ಪೊಲೀಸರಿಗೆ ಮಾಹಿತಿ ನೀಡಬಹುದು. ಒಂದು ವೇಳೆ ಜನರು ಹೋಟೆಲ್‌ಗಳು ಮತ್ತು ಲಾಡ್ಜ್‌ಗಳಲ್ಲಿ ಸರಿಯಾದ ದಾಖಲೆಗಳನ್ನು ತೋರಿಸದಿದ್ದಲ್ಲಿ ಪೊಲೀಸರಿಗೆ ಮಾಹಿತಿ ನೀಡಬಹುದು.
“ತಮಿಳುನಾಡು ಪೊಲೀಸರು ಈಗಾಗಲೇ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಮತ್ತು ಅವರು 40 ಜನರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆಗಾಗಿ ನಾವು 6-7 ಜನರನ್ನು ವಶಕ್ಕೆ ಪಡೆದಿದ್ದೇವೆ” ಎಂದಿದ್ದಾರೆ.
“ತಮಿಳುನಾಡಿನಲ್ಲಿ ಸಂಘಟಿತ ದಂಧೆ ಇದೆ ಅಂತೆಯೇ ಮಂಗಳೂರಿನಲ್ಲಿಯೂ ಸಹ ಸಂಘಟಿತ ಯಾರಾದರೂ ಇರಬಹುದು ಹಾಗಾಗಿ ಆ ಬಗ್ಗೆ ಆಳವಾಗಿ ತನಿಖೆ ಮಾಡುತ್ತೇವೆ. 38 ಶ್ರೀಲಂಕಾದವರು ಯಾವುದೇ ನೆಟ್ವರ್ಕ್ ಅಥವಾ ಸಮನ್ವಯವಿಲ್ಲದೆ ಮಂಗಳೂರಿನಲ್ಲಿ ಒಂದು ತಿಂಗಳು ಉಳಿಯುವುದು ಅಸಾಧ್ಯ” ಎಂದು ಅವರು ಹೇಳಿದರು.
ಡಿಸಿಪಿ ಕಾನೂನು ಸುವ್ಯವಸ್ಥೆ ಹರಿರಾಮ್ ಶಂಕರ್, ಎಸಿಪಿ ರಂಜಿತ್ ಮತ್ತು ಇತರರು ಉಪಸ್ಥಿತರಿದ್ದರು.