ಬೆಂಗಳೂರು : ಅಕ್ರಮವಾಗಿ ವಾಸವಿದ್ದು ಕೆಲವು ದಿನಗಳ ಹಿಂದೆ ಬಂಧನಕ್ಕೊಳಗಾದ ಪಾಕಿಸ್ತಾನ ಪ್ರಜೆಗಳ ವಿಚಾರಣೆ ವೇಳೆ ಹಲವು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ.
ಬಂಧಿತರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಅವರು ಧರ್ಮ ಪ್ರಚಾರ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ. ಅಷ್ಟೇ ಅಲ್ಲದೆ, ಲಂಡನ್ನಿಂದ ವ್ಯಕ್ತಿಯೊಬ್ಬ ನೀಡುತ್ತಿದ್ದ ಸಲಹೆ-ಸೂಚನೆಗಳ ಆಧಾರದಲ್ಲಿ ಅವರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂಬುದು ತಿಳಿದುಬಂದಿದೆ.
ಪಾಕಿಸ್ತಾನ ಪ್ರಜೆಗಳು ಲಂಡನ್ನಲ್ಲಿದ್ದ ವ್ಯಕ್ತಿಯ ಅಣತಿಯಂತೆ ಕಾರ್ಯಚಟುವಟಿಕೆ ನಡೆಸುತ್ತಿದ್ದರು. ಇವರೆಲ್ಲ ಸೂಫಿ ಪಂಗಡದವರಾಗಿದ್ದು, ತಮ್ಮ ಧರ್ಮ ಪ್ರಚಾರವಷ್ಟೇ ಉದ್ದೇಶವಾಗಿತ್ತು ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ತನಿಖೆ ವೇಳೆ, ಬಂಧಿತರು ಇದುವರೆಗೂ ಉಗ್ರ ಚಟುವಟಿಕೆಗಳಲ್ಲಿ ಶಾಮೀಲಾಗಿರದ ಮಾಹಿತಿ ಗೊತ್ತಾಗಿದೆ. ಕೇವಲ ಧರ್ಮ ಪ್ರಚಾರ ಮಾಡುತ್ತಿದ್ದು, ಮನೆ ಒಳಗೆ ಇದ್ದುಕೊಂಡೇ ಕಾರ್ಯಚಟುವಟಿಕೆ ನಡೆಸುತ್ತಿದ್ದರು.
ಬಂಧಿತರ ಗುಂಪಿನಲ್ಲಿ ಇನ್ನು ಮೂವತ್ತು ಜನರಿದ್ದು, ಅವರೆಲ್ಲಾ ಉತ್ತರ ಭಾರತದ ಕೆಲ ಜಾಗಗಳಲ್ಲಿ ಉಳಿದುಕೊಂಡಿದ್ದಾರೆ. ಒಟ್ಟು 150 ಜನರ ತಂಡ ಇದ್ದು, ಎಲ್ಲರೂ ಸಂದೇಶಗಳ ಮೂಲಕ ಸಂಪರ್ಕ ಸಾಧಿಸಿಕೊಳ್ಳುತ್ತಿದ್ದಾರೆ.
ಪಾಕಿಸ್ತಾನಿ ಪ್ರಜೆಗಳು ಭಾರತದ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ವಾಸವಾಗಿದ್ದುದರಿಂದ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಸದ್ಯ, ಎಫ್ಆರ್ಆರ್ಒ ಮೂಲಕ ಪಾಕಿಸ್ತಾನ ರಾಯಭಾರ ಕಚೇರಿಗೆ ಪತ್ರ ಬರೆಯಲು ಸಿದ್ಧತೆ ಮಾಡಲಾಗುತ್ತಿದೆ. ಬಂಧಿತರನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲು ಅಲ್ಲಿನ ರಾಯಭಾರಿ ಜೊತೆ ಸಂಪರ್ಕಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.