ದಕ್ಷಿಣ ಕನ್ನಡ ಜಿಲ್ಲೆಯ 17 ಗ್ರಾಮ ಪಂಚಾಯತ್ ಗಳನ್ನು ಜೂ.14ರಿಂದ 21ರ ತನಕ ಸೀಲ್ ಡೌನ್ ಮಾಡಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ವರದಿ ಆಧರಿಸಿ 50ಕ್ಕಿಂತ ಅಧಿಕ ಕೋವಿಡ್ ಸಕ್ರಿಯ ಪ್ರಕರಣಗಳು ಇರುವ ಪಂಚಾಯತ್ ಗಳನ್ನು ಸೀಲ್ ಡೌನ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
- ಮಂಗಳೂರು ತಾಲೂಕಿನ ಕೊಣಾಜೆ ಮತ್ತು ನೀರುಮಾರ್ಗ.
- ಬೆಳ್ತಂಗಡಿ ತಾಲೂಕಿನ ನಾರಾವಿ, ಕೊಯ್ಯೂರು, ಮಿತ್ತಬಾಗಿಲು, ಮಾಲಾಡಿ, ನೆರಿಯ, ಲಾಯಿಲ, ಉಜಿರೆ ಮತ್ತು ಚಾರ್ಮಾಡಿ ಮುಂದಿನ ಒಂದು ವಾರಗಳ ಕಾಲ ಸೀಲ್ ಡೌನ್ ಆಗಲಿವೆ.
- ಸುಳ್ಯ ತಾಲೂಕಿನ ಐವರ್ನಾಡು, ಅಮರ ಮುಡ್ನೂರು, ಕೊಲ್ಲಮೊಗರು, ಗುತ್ತಿಗಾರು ಮತ್ತು ಅರಂತೋಡು.
- ಕಡಬ ತಾಲೂಕಿನ ಸುಬ್ರಮಣ್ಯ ಹಾಗೂ ಸವಣೂರು 17 ಗ್ರಾಮ ಪಂಚಾಯತುಗಳ ಸಾಲಿನಲ್ಲಿ ಸೇರಿವೆ.
ಈ 17 ಗ್ರಾಮ ಪಂಚಾಯತ್ ಗಳಿಗೆ ಹೊರಗಿನಿಂದ ಬರುವವರು ಮತ್ತು ಅಲ್ಲಿಂದ ಹೊರಗೆ ಹೋಗುವವರಿಗೆ ಒಂದಷ್ಟು ನಿರ್ಬಂಧಗಳನ್ನು ವಿಧಿಸಲಾಗಿದೆ. ಕೋವಿಡ್ ಸೋಂಕಿನ ಸರಪಳಿಯನ್ನು ಮುರಿಯುವ ಸಲುವಾಗಿ ಕಠಿಣ ನಿರ್ಧಾರಕ್ಕೆ ಬರಲಾಗಿದೆ. ನಾಗರಿಕರು ಸಹಕರಿಸಬೇಕು ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕುಮಾರ್ ವಿನಂತಿಸಿದ್ದಾರೆ.

























