ಮಾಣಿ : ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ವನಮಹೋತ್ಸವ ನಿಮಿತ್ತವಾಗಿ ಒಂದು ಮರ ಹಲವು ವರ ಎಂಬ ವಿನೂತನ ಸಸಿ ಪೋಷಣಾ ಕಾರ್ಯದ ಆರಂಭವೂ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ಮಾಣಿಯಲ್ಲಿ ಜೂ.13 ರಂದು ಸಾಂಕೇತಿಕವಾಗಿ ಪ್ರಾರಂಭಗೊಂಡಿತು.
ಕೋವಿಡ್ ನಿಯಮಾವಳಿಗಳಿಂದ ಪ್ರಸಕ್ತ ಸಾಲಿನ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಮನೆಮನೆಯಲ್ಲಿ ಗಿಡ ಪೋಷಣಾ ಅಭಿಯಾನವನ್ನು ಯುವವಾಹಿನಿ ಮಾಣಿ ಘಟಕವು ಹಮ್ಮಿಕೊಂಡಿದ್ದು, ಈ ಯೋಜನೆಯ ಪ್ರಕಾರ ಘಟಕದ ಆಸಕ್ತ ಸದಸ್ಯರಿಗೆ ಒಂದೇ ತಳಿಯ,ಒಂದೇ ವಯೋಮಾನದ ಗಿಡಗಳನ್ನು ಘಟಕದ ವತಿಯಿಂದಲೇ ಒದಗಿಸಲಾಗಿದ್ದು, ಸದ್ರಿ ಗಿಡಗಳನ್ನು ಸದಸ್ಯರು ಅವರ ಮನೆಯ ಪರಿಸರದಲ್ಲಿ ನೆಟ್ಟು ಬೆಳೆಸಬೇಕಾಗಿದೆ. ಇದೊಂದು ಸ್ಪರ್ಧೆಯೂ ಆಗಿದ್ದು ಸದಸ್ಯರು ತಾವು ಗಿಡವನ್ನು ನೆಡುವ ಸಂದರ್ಭದ ಫೋಟೋ ದಾಖಲೀಕರಣ ಮಾಡಿಕೊಂಡು ಅದನ್ನು ಕಾರ್ಯಕ್ರಮದ ಸಂಚಾಲಕರಿಗೆ ಕಳಿಸಬೇಕಾಗುತ್ತದೆ. ಮಂದೆ ಗಿಡವನ್ನು ಚೆನ್ನಾಗಿ ಪೋಷಿಸಿ ಆರು ತಿಂಗಳ ನಂತರ ಗಿಡದ ಬೆಳವಣಿಗೆ ಯಾವ ರೀತಿ ನಡೆದಿದೆ ಎಂಬುದಾಗಿ ಫೋಟೊ ದಾಖಲೆಯನ್ನು ಸಂಚಾಲಕರಿಗೆ ನೀಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಅತಿ ಚೆನ್ನಾಗಿ ಗಿಡಪೋಷಣೆ ಮಾಡಿದ ಮೂವರು ಸದಸ್ಯರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡುವ ಯೋಜನೆಯನ್ನು ಘಟಕ ಹಾಕಿಕೊಂಡಿದೆ.
ಒಂದು ಮರ ಹಲವು ವರ ಯೋಜನೆಯನ್ನು ಗಿಡ ವಿತರಣೆಯ ಮೂಲಕ ಶುಭಾರಂಭ ಮಾಡಿದ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಉಪಾಧ್ಯಕ್ಷ ರಾಜೇಶ್ ಬಂಟ್ವಾಳರವರು ಮಾತನಾಡಿ ” ಒಂದಿಲ್ಲೊಂದು ಕ್ರಿಯಾಶೀಲ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸದಾ ಪ್ರಸ್ತುತವಾಗಿರುವ ಮಾಣಿ ಘಟಕವು ನಮ್ಮೆಲ್ಲರ ಪ್ರೀತಿಯ ಘಟಕವಾಗಿ ಬೆಳೆಯುತ್ತಿದೆ ” ಎಂದು ನುಡಿದರು.
ಮಾಣಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ ಕೊಡಾಜೆ ಇವರು ಮಾತನಾಡಿ, ” ವನಮಹೋತ್ಸವ ಆಚರಣೆಯ ಬಳಿಕ ನೆಟ್ಟ ಗಿಡದ ಬಗ್ಗೆ ಕಾಳಜಿಯನ್ನು ವಹಿಸದೆ ಅದು ಮೂಲೆಗುಂಪಾಗಿ ಕೇವಲ ದಾಖಲೆಯಲ್ಲಷ್ಟೇ ಉಳಿದುಬಿಡುವ ಸನ್ನಿವೇಶಗಳ ನಡುವೆ ಮಾಣಿ ಯುವವಾಹಿನಿಯ ಇಂಥಾದ್ದೊಂದು ಜವಾಬ್ದಾರಿಯುತ ಕಾರ್ಯವು ಶ್ಲಾಘನೀಯವಾದುದಾಗಿದೆ ” ಎಂದು ನುಡಿದರು.
ಅನಂತಾಡಿ ಉಪವಲಯ ಅರಣ್ಯಾಧಿಕಾರಿ ಕುಮಾರಿ ರಂಜಿತಾರವರು ಗಿಡಮರಗಳು ಹಾಗೂ ಪರಿಸರದ ಕುರಿತಾದ ಅವಿನಾಭಾವ ಸಂಬಂಧವನ್ನು ವಿಶದೀಕರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾಸಂಘ ಮಾಣಿ ಇದರ ಅಧ್ಯಕ್ಷರಾದ ಸುರೇಶ್ ಪೂಜಾರಿ ಸೂರ್ಯ, ಸಲಹಾ ಸಮಿತಿಯ ಅಧ್ಯಕ್ಷರಾದ ನಾರಾಯಣ ಸಾಲ್ಯಾನ್ ಮಂಜಲಹಿತ್ಲು, ಉಪಾಧ್ಯಕ್ಷ ಸೋಮಪ್ಪ ಸುವರ್ಣ ಮಾದೇಲು, ಯುವವಾಹಿನಿ ಕೇಂದ್ರ ಸಮಿತಿಯ ಕಲೆ,ಸಾಹಿತ್ಯ, ಸಾಂಸ್ಕೃತಿಕ ನಿರ್ದೇಶಕರಾದ ಹರೀಶ್ ಪೂಜಾರಿ ಬಾಕಿಲ, ಯುವವಾಹಿನಿ ಮಾಣಿ ಘಟಕದ ಮಾಜಿ ಅಧ್ಯಕ್ಷರಾದ ರಾಜೇಶ್ ಬಾಬನಕಟ್ಟೆ, ಉಪಾಧ್ಯಕ್ಷ ರವಿಚಂದ್ರ ಬಾಬನಕಟ್ಟೆ, ಸಲಹೆಗಾರರಾದ ಜಯಂತ್ ಬರಿಮಾರು, ಕೋಶಾಧಿಕಾರಿ ರಾಜೇಶ್ ಕೋಟ್ಯಾನ್, ಬಿಲ್ಲವ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ತ್ರಿವೇಣಿ ರಮೇಶ್ ಸೇರಿದಂತೆ ಘಟಕದ ನಿರ್ದೇಶಕರುಗಳು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷರಾದ ಪ್ರಶಾಂತ್ ಅನಂತಾಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕರಾದ ಕಿರಣ್ ಗೋಳಿಕಟ್ಟೆ ಅತಿಥಿಗಳಿಗೆ ಪುಷ್ಪಗೌರವ ನೀಡಿದರು. ಸದಸ್ಯೆ ಜಯಶ್ರೀ ಬರಿಮಾರು ಹಸಿರು ಸಂದೇಶ ವಾಚಿಸಿದರು. ಘಟಕದ ಕಾರ್ಯದರ್ಶಿ ರಾಜೇಶ್ ಎಸ್.ಬಲ್ಯ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಸುಜಿತ್ ಅಂಚನ್ ಮಾಣಿ ವಂದಿಸಿದರು.